Dakshina KannadaDistrictsKarnataka

ಅರಂತೋಡಲ್ಲಿ ಗಣಿ ಇಲಾಖೆಗೆ ಡೋಂಟ್ ಕೇರ್- ಕಾಟಾಚಾರಕ್ಕೆ ದಾಳಿ, ಮರಳು ದಂಧೆ ನಿರಾತಂಕ

ಮಂಗಳೂರು: ನದಿಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಸ್ಪಷ್ಟ ಆದೇಶ ನೀಡಿದ್ದರೂ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದು ಆಯಕಟ್ಟಿನ ಜಾಗಗಳಲ್ಲಿ ಅಕ್ರಮ ದಂಧೆಗೆ ಗ್ರೀನ್ ಸಿಗ್ನಲ್ ನೀಡಿರುವುದು ಬೆಳಕಿಗೆ ಬಂದಿದೆ.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಮರಳುಗಾರಿಕೆ ನಿಲ್ಲಿಸುತ್ತೇವೆ ಎಂದು ಪೋಸ್ ಕೊಟ್ಟಿದ್ದರು. ಆದರೆ ಸಂಜೆಯ ಹೊತ್ತಿಗೆ ಮತ್ತೆ ಮರಳು ಸಾಗಾಟ ನಿರಾತಂಕವಾಗಿ ಆರಂಭಗೊಂಡಿದ್ದು, ಈಗಾಗಲೇ ನೂರಾರು ಲೋಡ್ ಗಳಷ್ಟು ಮರಳು ಸಾಗಾಟ (Sand Mafia) ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಅರಂತೋಡು ಕಾಮಧೇನು ಹೋಟೆಲ್ (Kamadhenu Hotel) ಮುಂಭಾಗ ಮಲ್ಲಡ್ಕಕ್ಕೆ ತೆರಳುವ ಸಾರ್ವಜನಿಕ ರಸ್ತೆಯನ್ನು ಮರಳು ಲಾರಿಗಳು ಹದಗೆಡಿಸಿಬಿಟ್ಟಿವೆ. ಮಲ್ಲಡ್ಕದ ಖಾಸಗಿ ವ್ಯಕ್ತಿಯ ಜಾಗದಲ್ಲಿ ಹಗಲು ಹೊತ್ತು ನದಿಯಿಂದ ಮರಳು ತೆಗೆದು ರಾಶಿ ಹಾಕಲಾಗುತ್ತಿದ್ದು, ಸಂಜೆಯಾಗ್ತಾ ಇದ್ದಂತೆ ಲಾರಿಗಳು ಮರಳು ಸಾಗಾಟ ಮಾಡುತ್ತಿವೆ. ಈ ಬಗ್ಗೆ ಸ್ಥಳೀಯ ಪಿಡಿಓ ಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇದನ್ನೂ ಓದಿ: ಮಳಲಿ ಮಸೀದಿ ವಿವಾದ – ವಿಹೆಚ್‌ಪಿ ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು

ಇಲ್ಲಿನ ಅಕ್ರಮ ದಂಧೆಯಲ್ಲಿ ಪುತ್ತೂರು ಶಾಸಕರ (Puttur MLA) ಆಪ್ತನೊಬ್ಬ ತೊಡಗಿಕೊಂಡಿದ್ದು, ಶಾಸಕರ ಕೃಪೆಯಿಂದ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳವರೆಗೆ ಎಲ್ಲರೂ ಕೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಅರಂತೋಡು, ಅಜ್ಜಾವರ, ಮರ್ಕಂಜ, ಸಂಪಾಜೆಯಲ್ಲಿ ನಡೀತಾ ಇರೋ ಮರಳು ದಂಧೆಯಲ್ಲಿ ತೊಡಗಿರುವ ಉಬರಡ್ಕ ಮೂಲದ ವ್ಯಕ್ತಿ ಪುತ್ತೂರು ಶಾಸಕ ಮಠಂದೂರು ಜೊತೆ ಗುರುತಿಸಿಕೊಂಡಿದ್ದು, ಹತ್ತಾರು ಹೊಸ ಟಿಪ್ಪರ್ ಗಳನ್ನು ಮರಳು ಸಾಗಾಟಕ್ಕೆ ಬಳಸುತ್ತಿದ್ದು ಅಕ್ರಮ ಸಾಗಾಟದ ಬಗ್ಗೆ ಪ್ರಶ್ನೆ ಮಾಡಿದರೆ ಶಾಸಕರ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಾನೆ ಎನ್ನಲಾಗುತ್ತಿದೆ.

ಈ ಅಕ್ರಮ ದಂಧೆಯಿಂದಾಗಿ ಸರಕಾರಕ್ಕೆ ರಾಜಧನ ಪಾವತಿಸಿ ಲೈಸೆನ್ಸ್ ಪಡೆದಿರೋ ಮರಳು ಗುತ್ತಿಗೆದಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜಧನವನ್ನು ಪ್ರತಿವರ್ಷ ಏರಿಸುವ ಸರಕಾರ ಇನ್ನೊಂದು ಕಡೆ ಅಕ್ರಮ ದಂಧೆಗೂ ಪ್ರೋತ್ಸಾಹ ನೀಡುತ್ತಿದೆ. ಹೀಗಾದರೆ ಯಾರನ್ನು ಕೇಳೋದು ಅಂತಾರೆ ಗುತ್ತಿಗೆ ಪಡೆದವರು. ಇನ್ನಾದರೂ ಜಿಲ್ಲಾಡಳಿತ, ಗಣಿ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಪಯಸ್ವಿನಿ ನದಿಯೊಡಲು ಬರಿದಾಗಿ ಪ್ರವಾಹ ಪರಿಸ್ಥಿತಿ ತಲೆದೋರುವ ದಿನಗಳು ದೂರವಿಲ್ಲ.

Live Tv

Leave a Reply

Your email address will not be published. Required fields are marked *

Back to top button