ಹೈದರಾಬಾದ್: ಸಾಕು ನಾಯಿ (Pet Dog) ಆಟೋ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತೆಲಂಗಾಣದ (Telangana) ಖಮ್ಮಂ ( Khammam) ನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಉಂಡೇಟಿ ಶ್ರೀನಾಥ್ (23) ಎಂದು ಗುರುತಿಸಲಾಗಿದೆ. ಶ್ರೀನಾಥ್ ಡೆಕೊರೇಷನ್ ಸಂಬಂಧಿತ ಕೆಲಸ ಮಾಡುತ್ತಿದ್ದ. ಆಗಸ್ಟ್ 13ರಂದು ರಾತ್ರಿ 10:30ರ ವೇಳೆಗೆ ಶ್ರೀನಾಥ್ ತನ್ನ ಸ್ನೇಹಿತ ವೀರೇಶ್ ಜೊತೆ ಆಟೋದಲ್ಲಿ ಕುಳಿತಿದ್ದ. ಇದೇ ವೇಳೆ ಸ್ಥಳೀಯ ನಿವಾಸಿ ವೆಮುಲ ಮಧು (28) ತನ್ನ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಬಂದಿದ್ದ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯ ಬಿಲಿಯನೇರ್ ಕಾರ್ಖಾನೆ ಮೇಲೆ ರಷ್ಯಾ ದಾಳಿ
ಈ ವೇಳೆ ನಾಯಿ ಶ್ರೀನಾಥ್ ಮತ್ತು ವೀರೇಶ್ ಕುಳಿತಿದ್ದ ಆಟೋ ಸಮೀಪ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಅವರತ್ತ ಬೊಗಳಿದೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಶ್ರೀನಾಥ್, ಮಧು ಜೊತೆ ಮಾತಿನ ಚಕಮಕಿಗೆ ಇಳಿದಿದ್ದಾನೆ. ನಂತರ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಶ್ರೀನಾಥ್ ಮತ್ತು ವೀರೇಶ್ ಮಧುವಿನ ಮನೆ ಕಡೆಗೆ ತೆರಳಿದ್ದಾರೆ. ಅಲ್ಲಿ ಜಗಳ ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ದೊಣ್ಣೆಗಳಿಂದ ಹೊಡೆದಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿಬಿದ್ರೆ ಕ್ಷಮೆ ಇಲ್ಲ – ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ: ಖಾದರ್ ಖಡಕ್ ವಾರ್ನಿಂಗ್
ಗಲಾಟೆ ವೇಳೆ ಮಧು ಮನೆಯೊಳಗೆ ತೆರಳಿ ತರಕಾರಿ ಕತ್ತರಿಸಲು ಬಳಸುವ ಚಾಕು ತಂದು ಶ್ರೀನಾಥ್‌ಗೆ ಹಲವು ಬಾರಿ ಇರಿದಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಶ್ರೀನಾಥ್ ತೀವ್ರ ರಕ್ತಸ್ರಾವಕ್ಕೊಳಗಾಗಿ ಮನೆಯ ಸಮೀಪದ ಚರಂಡಿ ಬಳಿ ಕುಸಿದು ಬಿದ್ದಿದ್ದಾನೆ. ಬಳಿಕ ಮಧು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಹಿಡಕಲ್ ಜಲಾಶಯ ಭರ್ತಿ – ಇಂದು ಮಧ್ಯಾಹ್ನ ನೀರು ಬಿಡುಗಡೆ ಸಾಧ್ಯತೆ
ಕೂಡಲೇ ಶ್ರೀನಾಥ್‌ನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಶ್ರೀನಾಥ್‌ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಧುವನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು: ಪತ್ನಿ ವಶಕ್ಕೆ, ಕೊಲೆ ಶಂಕೆ
