ಬೆಂಗಳೂರು: ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ದಿನವೇ ಕಾಂಗ್ರೆಸ್ ಪಕ್ಷದ ನೂತನ ಕಚೇರಿ (Congress Office) ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಸಿದ್ಧತೆ ನಡೆಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅದೇ ಸಂಜೆ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿ ನೂತನ ಭವನಕ್ಕೆ ಭೂಮಿ ಪೂಜೆ ನೆರವೇರಿಸುವ ಯೋಜನೆ ರೂಪಿಸಲಾಗಿದೆ.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಜಾಗಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಎಲ್ಲೆಲ್ಲಿ ಯಾವ ವ್ಯವಸ್ಥೆ ಮಾಡಬೇಕು, ಎಷ್ಟು ಕುರ್ಚಿಗಳ ವ್ಯವಸ್ಥೆ ಇರಬೇಕು ಹಾಗೂ ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಾದ್ಯಂತ 100 ಪಕ್ಷದ ಕಚೇರಿಗಳನ್ನು ನಿರ್ಮಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು, ಅವುಗಳಿಗೂ ಮತ್ತೊಂದು ದಿನ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.
ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ನಾಲ್ಕು ವಿವಿಐಪಿ ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು. ಉಳಿದ ವಾಹನಗಳಿಗೆ ಅವಕಾಶ ನೀಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಇದು ಐತಿಹಾಸಿಕ ಕಾರ್ಯಕ್ರಮ. ರೇಸ್ ಕೋರ್ಸ್ ಕಾಂಗ್ರೆಸ್ ಕಚೇರಿ ಹಾಗೂ ಕ್ವೀನ್ಸ್ ರಸ್ತೆಯ ಕಚೇರಿಗೆ ಭೂಮಿ ಪೂಜೆ ಮಾಡುತ್ತೇವೆ. ಪ್ರಮಾಣವಚನ ಮುಗಿದ ಬಳಿಕ ಇಲ್ಲಿ ಕಾರ್ಯಕ್ರಮ ನಡೆಸುವ ಯೋಜನೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಡಿಸಿಎಂ ಪ್ರಪೋಸಲ್ ಬಂದಿಲ್ಲ, ಜೂನ್ 3ರಂದು ಸಭೆ ಮಾಡಿ ಫೈನಲ್ ಆಗುತ್ತೆ: ಮಲ್ಲಿಕಾರ್ಜುನ ಖರ್ಗೆ
ಆರ್‌ಸಿಬಿ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. ಇದೇ ಕಾರಣಕ್ಕೆ ಕಾರ್ಯಕರ್ತರಿಗೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಇತರ ನಾಯಕರು ಪ್ರಮಾಣವಚನ ಸ್ವೀಕರಿಸುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೂ ಮಾಹಿತಿ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿ ಸ್ಥಳ ಪರಿಶೀಲನೆ ವೇಳೆ ಮಾಜಿ ಸಚಿವರಾದ ಹೆಚ್.ಎಂ. ರೇವಣ್ಣ, ರಾಮಲಿಂಗಾ ರೆಡ್ಡಿ ಹಾಗೂ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.
