– ಈ ಶುಭಗಳಿಗೆಯಲ್ಲಿ ಪ್ರಮಾಣ ಸ್ವೀಕರಿಸಿದ್ರೆ ಅಧಿಕಾರ ಸುಭದ್ರನಾ?
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತ ನಿಗದಿಯಾಗಿದೆ. ಬುಧವಾರ (ಜೂ.3) ಸಂಜೆ 4 ಗಂಟೆ ನಂತರ ಡಿಕೆಶಿ ಗೋಧೂಳಿ ಮುಹೂರ್ತದಲ್ಲಿ ಶುಭಯೋಗ ಶುಭಫಲದಲ್ಲಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.
ಡಿಕೆ ಶಿವಕುಮಾರ್ ಅವರೊಟ್ಟಿಗೆ 10 ಜನ ಸಚಿವರು ಪ್ರಮಾಣ ಸ್ವೀಕರಿಸಲಿದ್ದಾರೆ. ಆ 10 ಮಂದಿ ಯಾರ್ಯಾರು ಅನ್ನೋದು ಸೋಮವಾರದ ಸಭೆಯಲ್ಲಿ ನಿರ್ಧಾರವಾಗಲಿದೆ.

ಡಿಕೆಶಿ ಪಟ್ಟಾಭಿಷೇಕ ಮುಹೂರ್ತ ಹೇಗಿದೆ?
ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು, ಜೂನ್ 3 ರಂದು ಸಂಜೆ 4 ಗಂಟೆ ನಂತರ ಶುಭಯೋಗ ಶುಭಫಲದಲ್ಲಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಸಂಖ್ಯಾಶಾಸ್ತ್ರದ ಆಧಾರದಲ್ಲೂ ಆ ದಿನ ಅತ್ಯಂತ ಮಂಗಳರವಾಗಿದೆ. 3-06-2026 ದಿನ ಸಂಖ್ಯಾಶಾಸ್ತ್ರದ ಪ್ರಕಾರ ಶುಭಫಲ ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಎಂದು ನಂಬಲಾಗಿದೆ.
ಶುಭಯೋಗದಲ್ಲಿ ಪ್ರಮಾಣ ಸ್ವೀಕಾರ ಮಾಡುವುದರಿಂದ ಅಧಿಕಾರ ಸುಭದ್ರವಾಗಿರಲಿದೆ. ಏಕೆಂದ್ರೆ ಪೂರ್ವಾಷಾಡ ನಕ್ಷತ್ರ, ತುಲಾ ಲಗ್ನ ಶುಭ ಮುಹೂರ್ತದಲ್ಲಿ ಗ್ರಹಗಳು ಬಲವಾಗಿರುತ್ತವೆ. ಗುರು ಉಚ್ಚಸ್ಥಿತಿಯಲ್ಲಿ ಇರುತ್ತಾನೆ ಅನ್ನೋದು ನಂಬಿಕೆ. ಅಲ್ಲದೇ ಬುಧವಾರ ಹೊಸತನ, ಹೊಸತನ್ನ ಆರಂಭಿಸೋಕೆ ಒಳ್ಳೆಯ ದಿನ ಅನ್ನೋ ನಂಬಿಕೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಸಂಧ್ಯಾಕಾಲ ಶುಭ ಮುಹೂರ್ತವಾಗಿದ್ದು, ಈ ವಿಶೇಷ ಮುಹೂರ್ತದಲ್ಲಿ ಡಿಕೆ ಪ್ರಮಾಣ ಸ್ವೀಕರಿಸುವ ಮೂಲಕ ರಾಜ್ಯಭಾರ ಶುರು ಮಾಡಲಿದ್ದಾರೆ.

ಗೋಧೂಳಿ ಮುಹೂರ್ತ ಏಕೆ ಮಂಗಳಕರ?
ಸೂರ್ಯಾಸ್ತ ಅಥವಾ ಕತ್ತಲಿನ ನಡುವಿನ ಸಮಯವನ್ನು ಗೋಧೂಳಿ ಅವಧಿ ಎಂದು ಕರೆಯಲಾಗುತ್ತದೆ. ಈ ಸಮಯ ಸಂಜೆ 05 ರಿಂದ 07 ರವರೆಗೆ ಮಾತ್ರ ಇರುತ್ತದೆ. ಈ ಗೋಧೂಳಿ ಅವಧಿಯನ್ನು ಅಥವಾ ಸಮಯವನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಏಕೆಂದರೆ ಈ ಸಮಯದಲ್ಲಿ ಹಸುಗಳು ತಮ್ಮ ಮನೆಗಳಿಗೆ ಹಿಂದಿರುಗುತ್ತವೆ ಮತ್ತು ಇದನ್ನು ಲಕ್ಷ್ಮಿ ದೇವಿಯ ಆಗಮನದ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಹಸುಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಇತರ ಜನರು ತಮ್ಮ ಮನೆಗಳಿಗೆ ಮರಳುತ್ತಾರೆ. ಪಕ್ಷಿಗಳು ಸಹ ತಮ್ಮ ಗೂಡಿನ ಕಡೆಗೆ ಆಕಾಶದಲ್ಲಿ ಸಾಲಾಗಿ ಹಾರುತ್ತವೆ. ಈ ಸಮಯವು ಉತ್ಸಾಹ, ಸಂತೋಷ ಮತ್ತು ತಂಪಾದ ವಾತಾವರಣದಿಂದ ಕೂಡಿರುತ್ತದೆ.
ಗೋಧೂಳಿ ವೇಳೆ ಅನೇಕ ದೋಷಗಳಿಂದ ಮುಕ್ತಿ
ಈ ಸಮಯವನ್ನು ಶುಭ ಕೆಲಸಗಳಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಶುಭ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ಸಮಯದಲ್ಲಿ ಮಾಡುವ ಪೂಜೆಯು ಅನೇಕ ದೋಷಗಳನ್ನು ಕೂಡ ತೆಗೆದುಹಾಕುತ್ತದೆ. ಅಲ್ಲದೆ, ಸಂಧ್ಯಾಕಾಲವು ಲಗ್ನದ ದೋಷಗಳನ್ನು ಸಹ ತೆಗೆದುಹಾಕುತ್ತದೆ ಮತ್ತು 8ನೇ ಮನೆಯಲ್ಲಿ ಅಂದರೆ ಪಾಪ ಮನೆಯಲ್ಲಿ ಗ್ರಹಗಳ ಸಂಚಾರದಿಂದ ಉಂಟಾಗುವ ದುಷ್ಪರಿಣಾಮಗಳಿಂದ ನಿಮ್ಮನ್ನು ಮುಕ್ತವಾಗಿಸುತ್ತದೆ.
