ಬೆಂಗಳೂರು: ಗೊಲ್ಲ ಸಮುದಾಯಕ್ಕೆ (Yadava Corporation) ಪ್ರತ್ಯೇಕ ಯಾದವ ನಿಗಮ ಸ್ಥಾಪಿಸುವ ಸಂಬಂಧ ಸಿಎಂ ಜೊತೆ ಚರ್ಚಿಸಿ, ನಿಗಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ (Shivaraj Thangadagi) ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಸೂಚನೆಯ ಮೂಲಕ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಈ ವಿಚಾರವನ್ನು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಗೊಲ್ಲ ಸಮುದಾಯಕ್ಕೆ ಪ್ರತ್ಯೇಕ ಯಾದವ ನಿಗಮ ಸ್ಥಾಪಿಸಬೇಕು. ಸಮುದಾಯದಲ್ಲಿ 26 ಉಪಜಾತಿಗಳಿವೆ. ನಾವು ಅತಿ ಹಿಂದುಳಿದವರು ಹಾಗೂ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿದ್ದೇವೆ. ನಮ್ಮ ಸಮುದಾಯದ ಜನಸಂಖ್ಯೆ 1 ಕೋಟಿ ಇದೆ. ನಮಗೆ ಇರುವ ಮೀಸಲಾತಿ ಪ್ರಮಾಣ ಸಾಲುತ್ತಿಲ್ಲ. ಶೇ.4ರಷ್ಟು ಮೀಸಲಾತಿ ಸಾಕಾಗುತ್ತಿಲ್ಲ. ಇದನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
60ರಿಂದ 70 ಕ್ಷೇತ್ರಗಳಲ್ಲಿ ನಮ್ಮ ಸಮುದಾಯ ಪ್ರಬಲವಾಗಿದೆ. ಮರಾಠ, ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ನಿಗಮ ಸ್ಥಾಪಿಸಿರುವಂತೆ ಯಾದವ ನಿಗಮವನ್ನೂ ಸ್ಥಾಪಿಸಬೇಕು. ನಮಗೆ ಪ್ರತ್ಯೇಕ ನಿಗಮ ಬೇಕು. ಸಚಿವರು ಈ ಬಗ್ಗೆ ಆಶ್ವಾಸನೆ ನೀಡಬೇಕು. ಇಲ್ಲವಾದರೆ ಗೊಲ್ಲರ ಶಾಪ ತಟ್ಟುತ್ತದೆ. ಕಳೆದ ನಾಲ್ಕು ವರ್ಷಗಳಿಂದ ನಮಗೆ ಮೋಸ ಮಾಡಲಾಗುತ್ತಿದೆ. ಯಾದವ ನಿಗಮ ಸ್ಥಾಪನೆ ಮಾಡಲೇಬೇಕು. ನಾವು ಈ ದೇಶದ ಜನರಲ್ಲವಾ? ಈಗಲೇ ನಿಗಮ ಸ್ಥಾಪನೆ ಘೋಷಣೆ ಮಾಡಬೇಕು ಎಂದು ನಾಗರಾಜ್ ಯಾದವ್ ಒತ್ತಾಯಿಸಿದರು. ಇದನ್ನೂ ಓದಿ: ಯಶ್ ಭೇಟಿಯಾಗಿ ʻಟಾಕ್ಸಿಕ್ʼಗೆ ಶುಭ ಹಾರೈಸಿದ ಬಾಲಿವುಡ್ ದಿಗ್ಗಜ ಅನುಪಮ್ ಖೇರ್
ಇದಕ್ಕೆ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ, ರಾಜ್ಯದಲ್ಲಿ ಈಗಾಗಲೇ 16 ನಿಗಮಗಳಿವೆ. ಗೊಲ್ಲ ಸಮುದಾಯಕ್ಕೆ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮ ಈಗಾಗಲೇ ಇದೆ. ಯಾದವ ಸಮುದಾಯಕ್ಕೆ ಪ್ರತ್ಯೇಕ ನಿಗಮ ಬೇಕು ಎಂದು ಮನವಿ ಮಾಡಲಾಗಿದೆ. ನಿಗಮ ಸ್ಥಾಪಿಸುವುದು ಸಿಎಂ ಅವರ ವ್ಯಾಪ್ತಿಗೆ ಬರುತ್ತದೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತಂದು ನಿಗಮ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: 30,000 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಜಾಲ: ಮುಂಬೈನಲ್ಲಿ ಇಬ್ಬರ ಬಂಧನ
