ಬಂಧಿತರನ್ನು ಫಹೀಮ್ ಮೊಯಿನ್ ಹುಸೇನ್ ಸಯ್ಯದ್ ಮತ್ತು ನಯೀಮ್ ಮುಯೀನ್ ಸಯ್ಯದ್ ಎಂದು ಗುರುತಿಸಲಾಗಿದೆ. ಭಾನುವಾರ (ಆ.23) ಮುಂಬೈನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದ ED, ವಿಶೇಷ PMLA ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ನ್ಯಾಯಾಲಯವು ಆರೋಪಿಗಳನ್ನು ಗೋವಾದ (Goa) ಪಣಜಿಗೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್ ನೀಡಿದೆ. ಇದನ್ನೂ ಓದಿ: ಮೆಡಿಕಲ್ ಶಾಪ್ ಮಾಲೀಕನ ಬರ್ಬರ ಹತ್ಯೆ ಕೇಸ್ – 6 ಮಂದಿ ಅರೆಸ್ಟ್
ಗೋವಾ ಮಹಿಳೆಗೆ 2.60 ಕೋಟಿ ವಂಚನೆ
ಗೋವಾದ ಮಹಿಳೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿರುವುದಾಗಿ ಬೆದರಿಸಿ, 2025ರ ಮೇ ಮತ್ತು ಜೂನ್ ನಡುವೆ 2.60 ಕೋಟಿ ರೂ. ಹಣವನ್ನು ‘ಸೀಕ್ರೆಟ್ ಸೂಪರ್‌ವಿಷನ್ ಅಕೌಂಟ್’ಗಳಿಗೆ ವರ್ಗಾಯಿಸುವಂತೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯ ವೇಳೆ ಭಾರಿ ಪ್ರಮಾಣದ ಸೈಬರ್ ವಂಚನೆ ಜಾಲ ಬೆಳಕಿಗೆ ಬಂದಿದೆ ಎಂದು ED ಮೂಲಗಳು ತಿಳಿಸಿವೆ.
ತನಿಖೆಯ ಪ್ರಕಾರ, ವಂಚನೆಯಿಂದ ಪಡೆದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿ, ಬಳಿಕ ನಗದಾಗಿ ಹಿಂಪಡೆದು ಆರ್‌ಬಿಐ ಪರವಾನಗಿ ಪಡೆದ ಹಣ ಬದಲಾವಣೆ ಸಂಸ್ಥೆಗಳ ಮೂಲಕ ವಿದೇಶಿ ಕರೆನ್ಸಿಗೆ ಪರಿವರ್ತಿಸಲಾಗುತ್ತಿತ್ತು ಎನ್ನಲಾಗಿದೆ.ಇದನ್ನೂ ಓದಿ: ಹಗರಣ, ಭ್ರಷ್ಟಾಚಾರ, ರಾಜಕೀಯ ಹಿನ್ನಡೆ – ಬಳ್ಳಾರಿ ಉಸ್ತುವಾರಿ ಸಚಿವರಾದರೆ ಸಂಕಷ್ಟ ಗ್ಯಾರಂಟಿನಾ?
20 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾಲ
ಈ ಸೈಬರ್ ಕ್ರಿಮಿನಲ್ ಜಾಲಕ್ಕೆ ಸಂಬಂಧಿಸಿದಂತೆ ಸುಮಾರು 300 ಸಂತ್ರಸ್ತರ ದೂರುಗಳ ಬಗ್ಗೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 150ರಿಂದ 160 ಎಫ್‌ಐಆರ್‌ಗಳು ದಾಖಲಾಗಿರುವ ಕುರಿತು ED ಪರಿಶೀಲಿಸುತ್ತಿದೆ. ಸಂತ್ರಸ್ತರಿಗೆ ಆಗಿರುವ ವಂಚನೆಯ ಮೊತ್ತ ಸುಮಾರು 4,000 ಕೋಟಿ ರೂ. ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಒಟ್ಟಾರೆ ಈ ಜಾಲವು ಸುಮಾರು 27,000 ಕೋಟಿ ರೂ. ಬ್ಯಾಂಕ್ ವಹಿವಾಟು ಹಾಗೂ 3,000 ಕೋಟಿ ರೂ. ನಗದು ವಹಿವಾಟು ನಡೆಸಿರಬಹುದು ಎಂದು ED ಶಂಕಿಸಿದೆ.
3.25 ಕೋಟಿ ರೂ. ನಗದು ವಶ
ತನಿಖೆಯ ಭಾಗವಾಗಿ ED ಜುಲೈನಲ್ಲಿ ಗೋವಾ ಮತ್ತು ಮುಂಬೈನಲ್ಲಿ ಶೋಧ ನಡೆಸಿತ್ತು. ಬಳಿಕ ಆಗಸ್ಟ್ 21ರಂದು ಮತ್ತೊಂದು ಸುತ್ತಿನ ಶೋಧ ನಡೆಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ಸುಮಾರು 3.25 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯಲ್ಲಿ ಕೆಲವು ಡಮ್ಮಿ ಕಂಪನಿಗಳ ಹೆಸರಿನಲ್ಲಿ ಚಾಲಕರು ಮತ್ತು ಕಡಿಮೆ ಆದಾಯದ ಉದ್ಯೋಗಿಗಳನ್ನು ನಿರ್ದೇಶಕರನ್ನಾಗಿ ತೋರಿಸಿರುವುದು ಪತ್ತೆಯಾಗಿದೆ. ಇಂತಹ ಕಂಪನಿಗಳನ್ನು ಹಣದ ವಹಿವಾಟು ಹಾಗೂ ವಂಚನೆ ಜಾಲ ನಿರ್ವಹಣೆಗೆ ಬಳಸಲಾಗುತ್ತಿತ್ತೆಂದು ED ಶಂಕಿಸಿದೆ.ಇದನ್ನೂ ಓದಿ: ಈದ್ ಮಿಲಾದ್‌ಗೆ 40 ಅಡಿ ಎತ್ತರದ ಟಿಪ್ಪು ಕಟೌಟ್, ಪಾಕ್ ಸೇನೆ ಹಾಡು ಬಳಸಿ ರೀಲ್ಸ್ – ಎಫ್‌ಐಆರ್ ದಾಖಲು
