ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು 2026 ಐಪಿಎಲ್‌ನಲ್ಲಿ ನಿರಂತರ 11 ಪಂದ್ಯಗಳಿಗೂ ಗೈರಾಗುರುವುದು ಸಿಎಸ್‌ಕೆ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಾಲೀಮಿನಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದರೂ, ಪಂದ್ಯದ ವೇಳೆ ಧೋನಿ ಅಲಭ್ಯರಾಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಫ್ರಾಂಚೈಸಿ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಈ ಬಗ್ಗೆ ಸ್ಪಷ್ಟನೆ ನೀಡದ ಕಾರಣ, ಧೋನಿ ಸದ್ದಿಲ್ಲದೇ ನಿವೃತ್ತಿ (MS Dhoni’s Retirement) ಪಡೆದಿದ್ದಾರೆಯೇ ಅಥವಾ ಕೇವಲ ಮೆಂಟರ್ ಪಾತ್ರಕ್ಕೆ ಸೀಮಿತವಾಗಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಇಂದು ಏಕನಾ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ 12ನೇ ಲೀಗ್ ಪಂದ್ಯವನ್ನಾಡಲಿದೆ. ಪ್ಲೇ ಆಫ್ಟ್ ಪ್ರವೇಶಿಸುವುದಕ್ಕೂ ಈ ಪಂದ್ಯ ನಿರ್ಣಾಯಕವಾಗಿದೆ.

ಪ್ರತಿ ಪಂದ್ಯಕ್ಕೂ ಮುನ್ನ ತಾಲೀಮಿನ ವೇಳೆ ಮಹೇಂದ್ರ ಸಿಂಗ್ ಧೋನಿ ಅವರು ಉತ್ಸಾಹದಿಂದ ಕಾಣಿಸಿಕೊಳ್ಳುವಾಗ ಖಂಡಿತ ಈ ಪಂದ್ಯದಲ್ಲಿ ಆಡುತ್ತಾರೆಂಬ ಆಶಾಭಾವ ಅಭಿಮಾನಿಗಳ ಮನದಲ್ಲಿ ಮೂಡಿರುತ್ತದೆ. ಅದೇ ಟಾಸ್ ವೇಳೆ ಪ್ಲೇಯಿಂಗ್ ಇಲೆವೆನ್ ಘೋಷಣೆಯಾದಾಗ ಮತ್ತೆ ನಿರಾಸೆ. ಧೋನಿ ಪಂದ್ಯದಲ್ಲಿಲ್ಲ, ಐಪಿಎಲ್ ಲೀಗ್ ಹಂತದ ಪಂದ್ಯಗಳು ಇನ್ನೇನು ಮುಗಿಯುತ್ತಿವೆ. ಆದರೂ ಧೋನಿ ಸುಳಿವೇ ಇಲ್ಲ. ಈಗಲೂ ಬಾರದಿದ್ದರೆ ಇನ್ನುಯಾವಾಗ ಎಂಬ ಪ್ರಶ್ನೆಯನ್ನು ಸಹಜವಾಗಿಯೇ ಅಭಿಮಾನಿಗಳು ಕೇಳುತ್ತಿದ್ದಾರೆ. ಅಥವಾ ಫ್ರಾಂಚೈಸಿ ಮತ್ತು ಧೋನಿ ಸೇರಿ ಅಭಿಮಾನಿಗಳನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆಯೇ ಅಥವಾ ಸದ್ದಿಲ್ಲದೇ ನಿವೃತ್ತಿಗೆ ಅಣಿಯಾಗುತ್ತಿದ್ದಾರೆಯೇ ಎಂಬ ಅನುಮಾನವೂ ಹೆಡೆಯೆತ್ತಿದೆ.

ಆರಂಭದಲ್ಲಿ ಸ್ನಾಯು ಸೆಳೆತ ಸಮಸ್ಯೆಯಿಂದ ಕೆಲ ಪಂದ್ಯಗಳಿಗೆ ಮಹಿ ಅಲಭ್ಯರಾಗಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿ ಅಧಿಕೃತವಾಗಿ ಹೇಳಿಕೊಂಡಿತ್ತು. ಆದ್ರೆ ಲಕ್ನೋ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯಕ್ಕೆ ಅವರು ಕಣಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು ಅಷ್ಟೇ ಅಲ್ಲ, ಇಂದು ಏಕನಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳಲು ಮಹಿ ಅವರ ಏರ್ ಟಿಕೆಟ್ ಕೂಡ ಬುಕ್ ಆಗಿತ್ತು. ಪ್ರಾರಂಭದ ಕೆಲವು ಪಂದ್ಯಗಳನ್ನ ಧೋನಿ ಆಡದಾಗ, ಬಹುಷಃ ಮುಂದಿನ ಪಂದ್ಯದಲ್ಲಿ ಧೋನಿ ಆಡಬಹುದು ಎಂದು ಅಭಿಮಾನಿಗಳು ಕಾಯುತ್ತಾ ಕುಳಿತರು. ಧೋನಿಯನ್ನು ನೋಡುವ ಸಲುವಾಗಿಯೇ ಮೈದಾನಕ್ಕುೂ ಬಂದರು. ಆದ್ರೆ ಸತತವಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

2023 ರಿಂದಲೂ ನಿವೃತ್ತಿ ಕೂಗು
2023ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದಾಗ ಇಡೀ ಕ್ರಿಕೆಟ್ ಬಳಗವೇ ಮಹಿ ನಿವೃತ್ತಿ ಘೋಷಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ ಇನ್ನೂ 2-3 ಆವೃತ್ತಿಗಳಲ್ಲಿ ಕಾಣಿಸಿಕೊಳ್ಳುವುದಾಗಿ ಮಹಿ ಸುಳಿವು ಕೊಟ್ಟಿದ್ದರು. 2025ರ ಆವೃತ್ತಿಗೆ ನಡೆದ ಮೆಗಾ ಹರಾಜಿನಲ್ಲಿ ಮಹಿ ಅವರನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಸಿಎಸ್‌ಕೆ ಫ್ರಾಂಚೈಸಿ ಖರೀದಿಸಿತ್ತು. 18ನೇ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡಿದ ಸಿಎಸ್‌ಕೆ ಲೀಗ್ ಸುತ್ತಿನಲ್ಲಿ ಕೇವಲ 4 ಪಂದ್ಯಗಳನ್ನ ಗೆದ್ದು ಹೊರನಡೆಯಿತು. ಇದೀಗ 11 ರಲ್ಲಿ 6 ಪಂದ್ಯಗಳನ್ನು ಗೆದ್ದಿರುವ ಸಿಎಸ್‌ಕೆ ಪ್ಲೇ ಆಫ್ಸ್ ಸನಿಹದಲ್ಲಿದೆ. ಇನ್ನುಳಿದ 3 ಪಂದ್ಯಗಳನ್ನು ಗೆದ್ದರೆ, ಐಪಿಎಲ್ ಇತಿಹಾಸದಲ್ಲೇ ಕೂಲ್ ಕ್ಯಾಪ್ಟನ್ ಇಲ್ಲದೇ ಫಸ್ಟ್ ಟೈಂ ಪ್ಲೇ ಆಫ್ ಪ್ರವೇಶಿಸಿದಂತಾಗುತ್ತದೆ.

ಸಿಎಸ್‌ಕೆ ಪರ 278 ಇನ್ನಿಂಗ್ಸ್ ಗಳನ್ನಾಡಿರುವ ಎಂ.ಎಸ್ ಧೋನಿ, 38.30 ಸರಾಸರಿಯಲ್ಲಿ 5,439 ರನ್ ಗಳಿಸಿದ್ದಾರೆ. ಇದರಲ್ಲಿ 375 ಬೌಂಡರಿ ಹಾಗೂ 264 ಸಿಕ್ಸರ್‌ಗಳೂ ಸೇರಿವೆ.

