ನವದೆಹಲಿ: ಐತಿಹಾಸಿಕ ಕೆಂಪುಕೋಟೆಗೆ (Red Fort) ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಬೆದರಿಕೆ ಕರೆ ಭಾರಿ ಆತಂಕ ಸೃಷ್ಟಿಸಿದೆ. ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳ ಸುದೀರ್ಘ ತಪಾಸಣೆಯ ಬಳಿಕ ಇದು ಹುಸಿ ಕರೆ ಎಂದು ದೃಢಪಟ್ಟಿದೆ.
ಮುಂಬೈ ಪೊಲೀಸ್ (Mumbai Police) ಕಂಟ್ರೋಲ್ ರೂಂಗೆ ಕರೆ ಮಾಡಿದ ಅಪರಿಚಿತನೊಬ್ಬ, ದೆಹಲಿಯ ಕೆಂಪುಕೋಟೆಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದಿದ್ದ. ತಕ್ಷಣವೇ ಎಚ್ಚೆತ್ತ ಮುಂಬೈ ಪೊಲೀಸರು ಈ ಮಾಹಿತಿಯನ್ನು ದೆಹಲಿ ಪೊಲೀಸ್ (Delhi Police) ಕಂಟ್ರೋಲ್ ರೂಂಗೆ ರವಾನಿಸಿದರು. ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು, ಕೆಂಪುಕೋಟೆ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಿದರು. ಇದನ್ನೂ ಓದಿ: ತೀವ್ರಗೊಂಡ ಬಿಡದಿ ಟೌನ್‌ಶಿಪ್ ಜಟಾಪಟಿ – ಭೈರಮಂಗಲದಲ್ಲಿ ರೈತರ ಪರ-ವಿರೋಧ ಘರ್ಷಣೆ
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಹಾಯದಿಂದ ಇಡೀ ಆವರಣವನ್ನು ಜಾಲಾಡಿದ ಭದ್ರತಾ ಸಿಬ್ಬಂದಿ, ಹಲವು ಗಂಟೆಗಳ ಕಾಲ ಸಮಗ್ರ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿ ಕರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
