– ಕೇರಳ ವೈದ್ಯರ ವಿರುದ್ಧ ಕೇಸ್ ದಾಖಲು
– ಮದುವೆಯಾದ 8 ವರ್ಷಗಳ ಬಳಿಕ ಜನಿಸಿದ್ದ ಏಕೈಕ ಪುತ್ರ
ತಿರುವನಂತಪುರಂ: ಕೇವಲ ತುಟಿಯ ಮೇಲಾದ ಸಣ್ಣ ಗಾಯಕ್ಕೆ ಹೊಲಿಗೆ (Stitch) ಹಾಕಲು ಅರಿವಳಿಕೆ (Anaesthesia) ನೀಡಿದ ಬೆನ್ನಲ್ಲೇ ಒಂದೂವರೆ ವರ್ಷದ ಗಂಡು ಮಗುವೊಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೇರಳದ(Kerala) ಕಣ್ಣೂರಿನಲ್ಲಿ ನಡೆದಿದೆ.
ದೇವನ್ಶ್ ಶೌರ್ಯ (18 ತಿಂಗಳು) ಮೃತಪಟ್ಟ ಮಗು. ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವನ್ಶ್(Devansh Shaurya) ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗದ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ. ಮದುವೆಯಾದ 8 ವರ್ಷಗಳ ಬಳಿಕ ಈ ದಂಪತಿಗೆ ಮಗು ಜನಿಸಿತ್ತು.
ಜುಲೈ 5 ರಂದು ದೇವನ್ಶ್ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು, ಕೆಳತುಟಿಗೆ ಸಣ್ಣದಾಗಿ ಗಾಯವಾಗಿತ್ತು. ಪೋಷಕರು ತಕ್ಷಣವೇ ದೇವನ್ಶ್‌ನನ್ನು ಪಯ್ಯನ್ನೂರಿನಲ್ಲಿರುವ ಬೇಬಿ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಕ್ಕೆ ಹೊಲಿಗೆ ಹಾಕಬೇಕೆಂದು ನಿರ್ಧರಿಸಿದ ವೈದ್ಯರು ಅರಿವಳಿಕೆ (Anaesthesia) ನೀಡಿದ್ದರು.
ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನಲ್ಲಿರುವ ಆಸ್ಪತ್ರೆಯ ಮತ್ತೊಂದು ಸುಧಾರಿತ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಸತತ ಐದು ದಿನಗಳ ಕಾಲ ವೆಂಟಿಲೇಟರ್ ಮೇಲಿದ್ದ ಮಗು, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದೆ. ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್ – ಶಿಕ್ಷಕಿಯರು, ಅಡುಗೆ ಸಹಾಯಕಿ ಸೇರಿ ನಾಲ್ವರ ವಿರುದ್ಧ FIR
ಕೇಸ್ ದಾಖಲು
ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ (Overdose) ನೀಡಿದ್ದರಿಂದಲೇ ಮಗುವಿನ ಮೆದುಳು ನಿಷ್ಕ್ರಿಯಗೊಂಡು (Brain Damage) ಸಾವನ್ನಪ್ಪಿದೆ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪಯ್ಯನ್ನೂರು ಪೊಲೀಸರು ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ಅಂಜಲಿ ಪೊದುವಾಳ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ (ಜೀವಕ್ಕೆ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯದ ಕೃತ್ಯ) ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆ ಹೇಳಿದ್ದೇನು?
ಮಗುವಿನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂಬ ಆರೋಪವನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿಹಾಕಿದೆ. ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಹಠಾತ್ ಹೃದಯ ಸ್ತಂಭನ (Unexpected Cardiac Arrest) ಉಂಟಾಗಿತ್ತು. ತಕ್ಷಣವೇ ಎಲ್ಲಾ ತುರ್ತು ಚಿಕಿತ್ಸೆ ನೀಡಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ವೈದ್ಯಕೀಯ ಶಾಸ್ತ್ರದಲ್ಲಿ ಸೂಕ್ತ ಪ್ರಮಾಣದ ಡೋಸ್ ನೀಡಿದರೂ ಕೆಲವೊಮ್ಮೆ ಅರಿವಳಿಕೆಯಿಂದ ಇಂತಹ ಗಂಭೀರ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಗುವನ್ನು ಉಳಿಸಲು ನಮ್ಮ ವೈದ್ಯರು ಎಲ್ಲಾ ರೀತಿಯ ಪ್ರೋಟೋಕಾಲ್ ಪಾಲಿಸಿದ್ದಾರೆ ಎಂದು ಆಸ್ಪತ್ರೆ ಹೇಳಿಕೆ ನೀಡಿದೆ.
ಈ ಘಟನೆಯ ಬೆನ್ನಲ್ಲೇ ಆಸ್ಪತ್ರೆಯ ಮುಂದೆ ಡಿವೈಎಫ್‌ಐ (DYFI) ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದು, ನಿರ್ಲಕ್ಷ್ಯ ತೋರಿದ ವೈದ್ಯರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪೊಲೀಸರು ಮಗುವಿನ ಶವಪರೀಕ್ಷೆಯ (Post-Mortem) ವರದಿಗಾಗಿ ಕಾಯುತ್ತಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
