– 3 ಪರ್ಯಾಯ ಸ್ಥಳಗಳನ್ನು ಘೋಷಿಸಿದ ದೆಹಲಿ ಪೊಲೀಸ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ(Protest) ಹಾಗೂ ಧರಣಿಗಳಿಗೆ ಹೆಸರುವಾಸಿಯಾಗಿದ್ದ ಐತಿಹಾಸಿಕ ಜಂತರ್ ಮಂತರ್(Jantar Mantar) ಸ್ಥಳವನ್ನು ಪ್ರತಿಭಟನಾ ತಾಣಗಳ ಪಟ್ಟಿಯಿಂದ ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
ಇನ್ಮುಂದೆ ಜಂತರ್ ಮಂತರ್‌ನಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್(Delhi Police) ಕಮಿಷನರ್ ಕಚೇರಿಯು ಅಧಿಕೃತ ಆದೇಶ ಹೊರಡಿಸಿದೆ.

3 ಹೊಸ ಪರ್ಯಾಯ ಸ್ಥಳಗಳು
ಪ್ರತಿಭಟನೆ ನಡೆಸಲು ಅನುಕೂಲವಾಗುವಂತೆ ಸಮಿತಿಯ ಶಿಫಾರಸಿನಂತೆ ಮೂರು ಪರ್ಯಾಯ ಮೈದಾನಗಳನ್ನು ನೂತನವಾಗಿ ನಿಗದಿಪಡಿಸಲಾಗಿದೆ. ರಾಮಲೀಲಾ ಮೈದಾನ (Ramlila Ground), ಬುರಾರಿ ಮೈದಾನ (Burari Ground), ಪೂರ್ವ ದೆಹಲಿಯ ಸಿಬಿಡಿ ಮೈದಾನದಲ್ಲಿ (CBD Ground, East Delhi) ಪ್ರತಿಭಟನೆ ನಡೆಸಲು ನಿಗದಿ ಮಾಡಲಾಗಿದೆ.
ಹಿಂದಿನ ಆದೇಶವನ್ನು ಭಾಗಶಃ ಮಾರ್ಪಡಿಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ನೂತನವಾಗಿ ಗುರುತಿಸಲಾಗಿರುವ ಈ ಮೂರು ಮೈದಾನಗಳಲ್ಲಿ ಪ್ರತಿಭಟನೆ ಅಥವಾ ಧರಣಿಗಳನ್ನು ಆಯೋಜಿಸಲು ಅನುಸರಿಸಬೇಕಾದ ವಿವರವಾದ ಪರಿಷ್ಕೃತ ಮಾರ್ಗಸೂಚಿಗಳನ್ನು (Standard Operating Procedure – SOP) ಶೀಘ್ರದಲ್ಲೇ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ದೆಹಲಿ ಪೊಲೀಸ್ ಇಲಾಖೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದರಿಂದ ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿತ್ತು. ಅಷ್ಟೇ ಅಲ್ಲದೇ ಅಲ್ಲಿ ಬೇರೆ ಜಾಗಗಳನ್ನು ಸೂಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಜಂತರ್ ಮಂತರ್ ಹತ್ತಿರವೇ ಸುಪ್ರೀಂ ಕೋರ್ಟ್, ಸಂಸತ್ ಭವನ ಇರುವ ಕಾರಣ ಸುಲಭವಾಗಿ ತಲುಪಬಹುದಿತ್ತು. ಈ ಭಾಗದಲ್ಲಿ ಸರ್ಕಾರಿ ವಸತಿಗೃಹಗಳಿದ್ದು, ಹಲವು ಸಂಸದರು ವಾಸಿಸುತ್ತಿರುವುದರಿಂದ ಅಲ್ಲಿ ಸದಾ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿತ್ತು.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದರಿಂದ ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಹಾಗೂ ತೀವ್ರ ಸಂಚಾರ ದಟ್ಟಣೆ (ಟ್ರಾಫಿಕ್) ಉಂಟಾಗುವ ಸಾಧ್ಯತೆಗಳನ್ನು ದೆಹಲಿ ಪೊಲೀಸರು ಪ್ರಮುಖ ಕಾರಣವಾಗಿ ನೀಡಿದ್ದಾರೆ.
ಜಂತರ್ ಮಂತರ್ ಜಾಗ ತೀರಾ ಚಿಕ್ಕದಾಗಿದ್ದು, ಅಲ್ಲಿ ಕೇವಲ 1,000 ಜನರಿಗೆ ಮಾತ್ರ ಅವಕಾಶವಿತ್ತು. ದೆಹಲಿ ಪೊಲೀಸರ ನಿಯಮಗಳ ಪ್ರಕಾರ, ಜಂತರ್ ಮಂತರ್‌ನಲ್ಲಿ ಯಾವುದೇ ಪ್ರತಿಭಟನೆ ನಡೆಸಬೇಕಿದ್ದರೂ ಗರಿಷ್ಠ 1,000 ಜನರ ಮಿತಿಯನ್ನು ಹೇರಲಾಗಿತ್ತು. ಆದರೆ ಇತ್ತೀಚೆಗೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಿಜೆಪಿ (CJP) ನಂತಹ ಸಂಘಟನೆಗಳು ಬೃಹತ್ ಪ್ರತಿಭಟನೆಗಳಿಗೆ ಕರೆ ನೀಡಿದಾಗ ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಲು ಆರಂಭಿಸಿದ್ದರು. ಇದರಿಂದಾಗಿ ಇಡೀ ಪ್ರದೇಶದಲ್ಲಿ ಭದ್ರತಾ ಲೋಪ ಮತ್ತು ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿತ್ತು.
ಸಂಸತ್ ಭವನದಿಂದ ಎಷ್ಟು ದೂರದಲ್ಲಿದೆ?
ನವದೆಹಲಿ ರೈಲ್ವೆ ನಿಲ್ದಾಣದ ಸಮೀಪವಿರುವ ರಾಮ್‌ಲೀಲಾ ಮೈದಾನವು ಸಂಸತ್ ಭವನಕ್ಕೆ ಅತಿ ಹತ್ತಿರವಿದ್ದು, ಸುಮಾರು 4.8 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ತಲುಪಲು ವಾಹನದಲ್ಲಿ ಸುಮಾರು 20 ರಿಂದ 25 ನಿಮಿಷಗಳು ಬೇಕಾಗುತ್ತದೆ.
ಪೂರ್ವ ದೆಹಲಿಯ ಕರ್ಕರ್ಡೂಮಾ ಬಳಿ ಇರುವ ಸಿಬಿಡಿ ಮೈದಾನವು ಸಂಸತ್ತಿನಿಂದ ಸುಮಾರು 14.8 ಕಿಲೋಮೀಟರ್ ದೂರದಲ್ಲಿದ್ದು, ಪ್ರಯಾಣಕ್ಕೆ ಸರಿಸುಮಾರು 45 ರಿಂದ 50 ನಿಮಿಷಗಳ ಸಮಯ ತಗುಲುತ್ತದೆ.
ಮೂರನೆಯದಾಗಿ, ಉತ್ತರ ದೆಹಲಿಯಲ್ಲಿರುವ ಬುರಾರಿ ಮೈದಾನವು ಸಂಸತ್ ಭವನದಿಂದ ಅತಿ ದೂರದಲ್ಲಿದ್ದು, ಸುಮಾರು 23.2 ಕಿಲೋಮೀಟರ್ ಅಂತರದಲ್ಲಿದೆ ಹಾಗೂ ಅಲ್ಲಿಗೆ ತಲುಪಲು ಕನಿಷ್ಠ ಒಂದು ಗಂಟೆಗೂ ಹೆಚ್ಚಿನ ಸಮಯ ಹಿಡಿಯುತ್ತದೆ. ರಾಮಲೀಲಾ ಮೈದಾನ ಮತ್ತು ಬುರಾರಿ ಮೈದಾನ ಜಾಗ ದೊಡ್ಡದಾಗಿದ್ದು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಇಲ್ಲಿ ಸೇರಬಹುದು.

