-ಬಿಎಸ್-6ಕ್ಕಿಂತ ಕೆಳಗಿನ ಹೊರರಾಜ್ಯಗಳ ವಾಹನಗಳ ಪ್ರವೇಶಕ್ಕೆ ನಿರ್ಬಂಧ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Dehli) ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ನಾಳೆಯಿಂದ (ನ.1) ಬಿಎಸ್-6 ಮಾನದಂಡಕ್ಕಿಂತ ಕೆಳಗಿನ ಹೊರರಾಜ್ಯಗಳಲ್ಲಿ ನೋಂದಣಿಯಾದ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಉಳಿದ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶನ ನೀಡಲಾಗಿದೆ. ಇದನ್ನೂ ಓದಿ: ರಾತ್ರಿ 8ರಿಂದ 10ರವರೆಗೆ ಬೆಂಗಳೂರಲ್ಲಿ ಪಟಾಕಿ ಸಿಡಿಸಲು ಅವಕಾಶ – ದೀಪಾವಳಿಗೆ ಟಫ್ ರೂಲ್ಸ್
ದೆಹಲಿ ಹೊರಭಾಗಗಳಲ್ಲಿ ನೋಂದಣಿಯಾಗಿರುವ ಬಿಎಸ್-3 ಮತ್ತು ಬಿಎಸ್-4 ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ದೆಹಲಿ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ನಿರ್ಬಂಧ 2027ರ ಜನವರಿ 31ರವರೆಗೆ ಜಾರಿಯಲ್ಲಿರಲಿದೆ. ಆದರೆ ಬಿಎಸ್-6 ವಾಹನಗಳು, ಸಿಎನ್ಜಿ ಮತ್ತು ವಿದ್ಯುತ್ ಚಾಲಿತ ವಾಹನಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ದೆಹಲಿಯಲ್ಲೇ ನೋಂದಣಿಯಾಗಿರುವ ವಾಹನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಹಾಲು, ತರಕಾರಿ, ಹಣ್ಣು, ಔಷಧ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೂ ನಿರ್ಬಂಧದಿಂದ ವಿನಾಯಿತಿ ಕಲ್ಪಿಸಲಾಗಿದೆ.
ಇದೇ ವೇಳೆ ದೆಹಲಿಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಮಾನ್ಯವಾದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಹೊಂದಿರುವುದು ಕಡ್ಡಾಯವಾಗಿದೆ. ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ವಿತರಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಇದನ್ನೂ ಓದಿ: ಯಾವ್ದೇ ಭೌಗೋಳಿಕ ಮಿತಿಗಳಿಲ್ಲ, ಅಮೆರಿಕ ದಾಳಿ ಮಾಡಿದ್ರೆ ತಕ್ಷಣ ಪ್ರತಿಕ್ರಿಯೆ ಕೊಡಿ – ಇರಾನ್ ಸೇನೆಗೆ ಖಮೇನಿ ಆದೇಶ
ಇದಲ್ಲದೆ, ವಾಯುಮಾಲಿನ್ಯ ನಿಯಂತ್ರಣ ಆಯೋಗ (ಸಿಎಕ್ಯೂಎಂ) ದೆಹಲಿ ಸೇರಿದಂತೆ ರಾಷ್ಟ್ರೀಯ ರಾಜಧಾನಿ ವಲಯದಾದ್ಯಂತ ನವೆಂಬರ್ 5ರಿಂದ 20ರವರೆಗೆ ಧೂಳು ಉತ್ಪಾದಿಸುವ ನಿರ್ಮಾಣ ಮತ್ತು ಕಟ್ಟಡಗಳ ನೆಲಸಮ ಕಾರ್ಯಗಳಿಗೆ ನಿರ್ಬಂಧ ವಿಧಿಸಿದೆ. ರೈಲ್ವೆ, ಮೆಟ್ರೋ, ವಿಮಾನ ನಿಲ್ದಾಣ, ಆಸ್ಪತ್ರೆ, ನೀರು ಸರಬರಾಜು, ನೈರ್ಮಲ್ಯ, ರಾಷ್ಟ್ರೀಯ ಭದ್ರತೆ ಹಾಗೂ ಪ್ರಮುಖ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ.
ಈ ಕಚೇರಿ ನಿಯಮ ದೆಹಲಿ ಮಾತ್ರವಲ್ಲದೆ ಹರಿಯಾಣದ ಗುರುಗ್ರಾಮ, ಫರಿದಾಬಾದ್, ಸೋನಿಪತ್ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್ ಮತ್ತು ಗೌತಮ ಬುದ್ಧ ನಗರ ಜಿಲ್ಲೆಗಳಿಗೂ ಅನ್ವಯಿಸಲಿದೆ. ಅಗತ್ಯ ಸೇವೆಗಳು ಮತ್ತು ಮನೆಯಿಂದ ಕೆಲಸ ಮಾಡಲು ಸಾಧ್ಯವಾಗದ ಕೈಗಾರಿಕಾ ಘಟಕಗಳಿಗೆ ವಿನಾಯಿತಿ ಇರಲಿದೆ.ಇದನ್ನೂ ಓದಿ: ಉತ್ತರಾಖಂಡ ದುರಂತ – ನಾಳೆ ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿಗೆ ಮೃತದೇಹ ರವಾನೆ ಸಾಧ್ಯತೆ
ಇನ್ನು ದೆಹಲಿಯ ಗಡಿಗಳಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾ ಇಡಲು ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಬಳಸಲಾಗುತ್ತದೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಇದನ್ನೂ ಓದಿ: ಇಂಡಿಯಾ ಒಕ್ಕೂಟದಿಂದ ಜನತಾ ಮಹಾಭಿಯೋಗ – ಜ್ಞಾನೇಶ್ ಕುಮಾರ್ ವಿರುದ್ಧ 6 ಆರೋಪಗಳನ್ನ ಪಟ್ಟಿ ಮಾಡಿದ ಖರ್ಗೆ
