ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬಳಿಕ ಬಿಜೆಪಿ (BJP) ಗೆಲುವು ಸಾಧಿಸಿದ್ದು ಕಾಂಗ್ರೆಸ್ (Congress) ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ 201 ಮತಗಳ ಅಂತರದಿಂದ ಕೈ ಅಭ್ಯರ್ಥಿ ಟಿ.ಡಿ.ರಾಜೇಗೌಡ (TD Rajegowda) ಗೆಲುವು ಸಾಧಿಸಿದ್ದು, 2026ರ ಮರು ಎಣಿಕೆಯಲ್ಲಿ 52 ಮತಗಳ ಅಂತರದಿಂದ ಅದೇ ರಾಜೇಗೌಡ ಸೋಲುಂಡಿದ್ದರು. ಇದೀಗ, ಮತಚೋರಿ ಆರೋಪ ಮಾಡಿದ್ದ ಮಾಜಿ ಶಾಸಕ ರಾಜೇಗೌಡ ಹಾಗೂ ಕೈ ಕಾರ್ಯಕರ್ತರು ಮತಚೋರಿ ಮಾಡಿದವರ ವಿರುದ್ಧ ದೇವರ ಮೊರೆ ಹೋಗಿದ್ದಾರೆ.
ಇಂದು ಕೊಪ್ಪ (Koppa) ತಾಲೂಕಿನ ವೀರಭದ್ರ ಸ್ವಾಮಿ ದೇವಾಲಯದ ಹಾಗೂ ಗಬ್ಬಾನೆ ಭೂತರಾಯ ದೇಗುಲದಲ್ಲಿ ನೂರಾರು ಕಾರ್ಯಕರ್ತರ ಜೊತೆ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಸಂಕಲ್ಪ ಮಾಡಿದ್ದು, ಮತಚೋರಿ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಕಲ್ಪ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಮತಚೋರಿ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಬೇಡಿಕೊಂಡಿದ್ದಾರೆ. ವೀರಭದ್ರ ಸ್ವಾಮಿ ಹಾಗೂ ಭೂತರಾಯನ ದೇಗುಲದ ಬಳಿಕ ಒಂದು ಚರ್ಚ್ ಹಾಗೂ ಒಂದು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಯಡಿಯೂರಪ್ಪ ಅಭಿಮಾನೋತ್ಸವ’ಕ್ಕೆ ಅಮಿತ್ ಶಾ ಅದ್ದೂರಿ ಚಾಲನೆ – ಬಿಎಸ್‌ವೈಗೆ ಸನ್ಮಾನ

ಈಗಾಗಲೇ ಅಂಚೆ ಮತ ಮರು ಎಣಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ರಾಜೇಗೌಡ ಒಂದೆಡೆ ಕಾನೂನು ಮುಖಾಂತರವೂ ಹೋರಾಟ ಮಾಡುತ್ತಿದ್ದು, ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ. 2023ರಲ್ಲಿ ಮಾನ್ಯವಾಗಿದ್ದ 255 ಮತಗಳು 2026ರಲ್ಲಿ ಹೇಗೆ ಅಮಾನ್ಯವಾದವೂ ಎಂದು ಪ್ರಶ್ನಿಸಿದ್ದಾರೆ. ಇದು ವೋಟ್ ಚೋರಿ ಅಲ್ಲದೆ ಮತ್ತೇನೂ ಅಲ್ಲ ಎಂದು ಆರೋಪಿಸಿರೋ ರಾಜೇಗೌಡ ದೇವರು, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸರ ಮೇಲೆ ಹಲ್ಲೆ – ವಿಡಿಯೋ ವೈರಲ್

ಈ ಮಧ್ಯೆ 2023ರ ಮತ ಎಣಿಕೆ ವೇಳೆ ಬಿಜೆಪಿಯ ಏಜೆಂಟ್ ಆಗಿದ್ದ ರಾಮಸ್ವಾಮಿ ಹಾಗೂ ಸತೀಶ್ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು ಎಂದು ಅದೇ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಗುದ್ದಿದ ಬಿಎಂಟಿಸಿ ಬಸ್

