– ಈಗಾಗಲೇ 24 ಸಾವಿರ ಎಕರೆ ಭೂಮಿ ಗುರುತು
ಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್–ಜನವರಿಯಲ್ಲಿ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನ ಹಂಚಿಕೆ (Site Allotment) ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದರು.
ವಿಕಾಸಸೌಧದಲ್ಲಿ ಡಿಸಿ ಮತ್ತು ಎಸಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15 ಲಕ್ಷ ನಿವೇಶನಗಳನ್ನ ಒದಗಿಸುವ ಘೋಷಣೆ ಮಾಡಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳು 24 ಸಾವಿರ ಎಕರೆ ಭೂಮಿಯನ್ನು ಗುರುತಿಸಿದ್ದಾರೆ. ಈ ಭೂಮಿಯಲ್ಲಿ ಬಡಾವಣೆಗಳನ್ನ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲಾಗುವುದು. ಒಂದು ಎಕರೆಗೆ ಸುಮಾರು 30ರಿಂದ 40 ನಿವೇಶನಗಳನ್ನು ರೂಪಿಸಬಹುದು. ಭೂಮಿ ಖರೀದಿ ಸೇರಿದಂತೆ ಪ್ರತಿ ಎಕರೆಗೆ ಸುಮಾರು 15 ಲಕ್ಷ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ. ನಿವೇಶನ ಹಂಚಿಕೆ ಪ್ರಕ್ರಿಯೆಯನ್ನ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.
ಜನರ ಹಿತಕ್ಕಾಗಿ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವುದು ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಇಂದು ವಿಕಾಸಸೌಧದಲ್ಲಿ ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಹಾರ ವಿತರಣೆಯಲ್ಲಿ ಯಾವುದೇ ವಿಳಂಬವಾಗಬಾರದು. ಅರ್ಹ ಪ್ರತಿ ರೈತರಿಗೆ ಸರ್ಕಾರ ಘೋಷಿಸಿರುವ ₹5,000 ಬರ ಪರಿಹಾರವನ್ನು ತ್ವರಿತವಾಗಿ ಅವರ ಖಾತೆಗಳಿಗೆ ಜಮೆ ಮಾಡಬೇಕು. ಪರಿಹಾರ ವಿತರಣೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳು ಕೂಡಲೇ ಕ್ರಮ ಕೈಗೊಂಡು, ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಬರ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಾನುವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ರೈತರಿಗೆ ಮೇವಿನ ಬೀಜದ ಕಿಟ್ಗಳ ವಿತರಣೆಗೆ ಆದ್ಯತೆ ನೀಡಬೇಕು. ಈ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ ₹30 ಕೋಟಿ ಅನುದಾನ ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಬಡವರಿಗೆ ಸ್ವಂತ ನಿವೇಶನ ಒದಗಿಸುವ ಉದ್ದೇಶದಿಂದ ರೂಪಿಸಿರುವ 15 ಲಕ್ಷ ನಿವೇಶನಗಳ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕು. ಈಗಾಗಲೇ ಸುಮಾರು 24 ಸಾವಿರ ಎಕರೆ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹಾಗೂ ನಿವೇಶನಗಳ ಅಭಿವೃದ್ಧಿ ಮತ್ತು ಹಂಚಿಕೆ ಪ್ರಕ್ರಿಯೆಗೆ ವೇಗ ನೀಡುವಂತೆ ಸೂಚಿಸಿದೆ.
ಅದೇ ರೀತಿ, ಪಿಂಚಣಿ ಸೌಲಭ್ಯಕ್ಕೆ ಒಳಪಡದ ಸುಮಾರು 23 ಲಕ್ಷ ಜನರನ್ನು ಗುರುತಿಸಲಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ಅರ್ಹತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಪಿಂಚಣಿಗೆ ಅರ್ಹರಾದವರು ಸೌಲಭ್ಯದಿಂದ ವಂಚಿತರಾಗದಂತೆ ಹಾಗೂ ಅನರ್ಹರಿಗೆ ಸೌಲಭ್ಯ ದೊರೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು.
ಸರ್ಕಾರದ ಪ್ರತಿಯೊಂದು ಯೋಜನೆಯ ಅನುಷ್ಠಾನದಲ್ಲಿಯೂ ಪಾರದರ್ಶಕತೆ, ವೇಗ ಮತ್ತು ಹೊಣೆಗಾರಿಕೆ ಇರಬೇಕು. ಅಧಿಕಾರಿಗಳು ಕೇವಲ ಪ್ರಗತಿ ವರದಿಗಳನ್ನು ಸಲ್ಲಿಸುವುದಕ್ಕೆ ಸೀಮಿತವಾಗದೆ, ಜನರಿಗೆ ಯೋಜನೆಗಳ ನೈಜ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ನಿಗದಿತ ಕಾಲಮಿತಿಯೊಳಗೆ ಗುರಿ ಸಾಧಿಸುವ ಮೂಲಕ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಬೇಕು ಎಂದು ಸೂಚಿಸಿದೆ.
Making administration more responsive and ensuring that Government schemes reach eligible beneficiaries on time remain our key priorities. With this objective, I reviewed the progress of the Revenue and Youth Empowerment & Sports Departments at Vikasa Soudha today and issued necessary directions to all Deputy Commissioners and Assistant Commissioners.
Farmers are facing severe hardship due to drought, and there should be no delay in relief distribution. I have directed officials to ensure that the ₹5,000 drought relief announced for every eligible farmer is credited at the earliest, particularly in districts where disbursement is still pending.
Officials have also been instructed to prevent drinking water shortages, ensure adequate fodder for livestock and prioritise distribution of fodder seed kits. A proposal seeking an additional ₹30 crore for this purpose is under consideration.
The 15 lakh housing sites programme for the poor must also be expedited. Around 24,000 acres of Government land have already been identified, and officials have been asked to speed up beneficiary identification, site development and allotment.
Similarly, around 23 lakh pension cases are being verified to ensure that no eligible beneficiary is left out and no ineligible person receives the benefit.
Every Government programme must be implemented with transparency, speed and accountability. What matters is not merely progress reports, but whether the benefits actually reach the people.
— Dr. G Parameshwara (@DrParameshwara) November 20, 2026
1 ವರ್ಷದಲ್ಲಿ 10 ಲಕ್ಷ ಪೋಡಿ ಅರ್ಜಿ ವಿಲೇವಾರಿಗೆ ಸೂಚನೆ
ರಾಜ್ಯದಲ್ಲಿ ಸುಮಾರು 10 ಲಕ್ಷ ದರ್ಖಾಸ್ತು ಪೋಡಿ ಅರ್ಜಿಗಳು ಬಾಕಿ ಉಳಿದಿವೆ. ಪ್ರಸ್ತುತ ಇರುವ ವೇಗದಲ್ಲಿ ಇವುಗಳನ್ನು ವಿಲೇವಾರಿ ಮಾಡಲು ಸುಮಾರು 30 ವರ್ಷಗಳು ಬೇಕಾಗಬಹುದು. ಹೀಗಾಗಿ, ಒಂದು ವರ್ಷದೊಳಗೆ ಎಲ್ಲಾ ಅರ್ಜಿಗಳನ್ನ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನ ಕಲ್ಪಿಸಲಾಗುವುದು ಎಂದು ತಿಳಿಸಿದರು.
136 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ
ರಾಜ್ಯದಲ್ಲಿ ಒಟ್ಟು 136 ಕೋಟಿ ಪುಟಗಳ ಭೂ ದಾಖಲೆಗಳಿದ್ದು, ಬಹುತೇಕ ದಾಖಲೆಗನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ 32 ಕೋಟಿ ಪುಟಗಳ ದಾಖಲೆಗಳ ಡಿಜಿಟಲೀಕರಣ ಬಾಕಿಯಿದ್ದು, ಅದನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಭೂ ದಾಖಲೆಗಳಿಗೆ 16ಎ ಏಕೈಕ ದಾಖಲೆ
ಭೂಮಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನ ಒಂದೇ ದಾಖಲೆಯಲ್ಲಿ ಒದಗಿಸುವ ಉದ್ದೇಶದಿಂದ 16ಎ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಹಿಂದೆ ಭೂಮಾಲೀಕರು ಪಹಣಿ, ಆಕಾರಬಂದ್, ನಕ್ಷೆ, ಕ್ರಾಪ್ ಸರ್ಟಿಫಿಕೆಟ್ ಸೇರಿದಂತೆ ವಿವಿಧ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಇವೆಲ್ಲವನ್ನೂ ಒಟ್ಟುಗೂಡಿಸಿ 16ಎ ಎಂಬ ಏಕೈಕ ದಾಖಲೆಯನ್ನು ಸಿದ್ಧಪಡಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟು 2.1 ಕೋಟಿ ದಾಖಲೆಗಳ ಪೈಕಿ ಈಗಾಗಲೇ 9.5 ಲಕ್ಷ 16ಎ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ನಾಮಮಾತ್ರ ಶುಲ್ಕ ನಿಗದಿಪಡಿಸಲಾಗುತ್ತದೆ. ಶೀಘ್ರದಲ್ಲೇ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು. ಈ ಯೋಜನೆಯ ಕುರಿತು ಕೇಂದ್ರ ಸರ್ಕಾರದ ಅಧಿಕಾರಿಗಳೂ ಅಧ್ಯಯನ ನಡೆಸುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಬಾಕಿ ಪ್ರಕರಣಗಳ ವಿಲೇವಾರಿಗೆ ಗಡುವು
ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಪ್ರಕರಣ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿಯಬಾರದು. ಜಿಲ್ಲಾಧಿಕಾರಿಗಳಿಗೆ 1 ವರ್ಷ, ಉಪವಿಭಾಗಾಧಿಕಾರಿಗಳಿಗೆ ಆರು ತಿಂಗಳು ಹಾಗೂ ತಹಶೀಲ್ದಾರ್ಗಳಿಗೆ 90 ದಿನಗಳ ಗಡುವು ನಿಗದಿಪಡಿಸಲಾಗಿದೆ. ನಿಗದಿತ ಅವಧಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ ಎಂದರು.
