– 170 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ
– ಆಂಧ್ರ, ಜಾರ್ಖಂಡ್, ಒಡಿಶಾದಲ್ಲಿ ಭಾರೀ ಮಳೆ ಎಚ್ಚರಿಕೆ
– ಒಡಿಶಾದಲ್ಲಿ ಶಾಲೆಗಳಿಗೆ ರಜೆ ಘೋಷಣೆ
ನವದೆಹಲಿ: ಅರ್ನಾಬ್ ಚಂಡಮಾರುತ (Cyclonic Storm Arnab) ಭಾರತದ ಪೂರ್ವ ಕರಾವಳಿಯತ್ತ ನುಗ್ಗುತ್ತಿದ್ದು, ಅ.28ರ ಮುಂಜಾನೆ ಅಥವಾ ಮಧ್ಯಾಹ್ನದ ವೇಳೆಗೆ ಆಂಧ್ರಪ್ರದೇಶದ (Andhra Pradesh) ಬಾಪಟ್ಲಾ ಮತ್ತು ವಿಶಾಖಪಟ್ಟಣಂ, ಯಾನಂ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬುಧವಾರ ಮಧ್ಯಾಹ್ನದ ವೇಳೆಗೆ ಗಂಟೆಗೆ 125-135 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸುವ ಸಾಧ್ಯತೆಯಿದೆ. ಗಾಳಿಯ ವೇಗವು ಗಂಟೆಗೆ 170 ಕಿ.ಮೀ ವರೆಗೂ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ಇದಕ್ಕೂ ಮೊದಲು, ಗಂಟೆಗೆ 115-125 ಕಿ.ಮೀ ವೇಗದಲ್ಲಿ ನಿರಂತರ ಗಾಳಿ ಬೀಸಬಹುದು ಮತ್ತು ಗರಿಷ್ಠ ವೇಗ 150 ಕಿ.ಮೀ ತಲುಪಬಹುದು ಎಂದು ಮುನ್ಸೂಚನೆ ನೀಡಲಾಗಿತ್ತು.
ಅ.27 ರಂದು ಒಡಿಶಾದ ಹಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಬಲವಾದ ಗಾಳಿ ಬೀಸಿದೆ. ಮುಂದಿನ 24 ಗಂಟೆಗಳಲ್ಲಿ ಈ ಚಂಡಮಾರುತ ಆಂಧ್ರಪ್ರದೇಶ ಕರಾವಳಿಯನ್ನು ತಲುಪುವ (ಭೂಭಾಗವನ್ನು ಪ್ರವೇಶಿಸುವ) ನಿರೀಕ್ಷೆಯಿದೆ. ವಿಶಾಖಪಟ್ಟಣಂನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ ಎಂದು ವರದಿಯಾಗಿದೆ.
ಜಾರ್ಖಂಡ್ನ ಹಲವೆಡೆ ಮಳೆ ಎಚ್ಚರಿಕೆ
ಜಾರ್ಖಂಡ್ನ ರಾಂಚಿ, ಖುಂಟಿ, ಸಿಮ್ದೇಗಾ, ಗುಮ್ಲಾ, ಲೋಹರ್ದಾಗಾ, ಸಾರೈಕೆಲಾ-ಖರ್ಸಾವಾನ್, ಹಾಗೂ ಪೂರ್ವ ಮತ್ತು ಪಶ್ಚಿಮ ಸಿಂಗ್ಭೂಮ್ ಜಿಲ್ಲೆಗಳಿಗೆ ಅಕ್ಟೋಬರ್ 28ರ ಬೆಳಿಗ್ಗೆ 8.30ರಿಂದ ಮುಂದಿನ 24 ಗಂಟೆಗಳ ಅವಧಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಗರ್ಹ್ವಾ, ಪಲಾಮು, ಲತೇಹಾರ್, ಲೋಹರ್ದಾಗಾ, ಗುಮ್ಲಾ, ಸಿಮ್ದೇಗಾ ಮತ್ತು ಪಶ್ಚಿಮ ಸಿಂಗ್ಭೂಮ್ ಜಿಲ್ಲೆಗಳಿಗೆ ಅಕ್ಟೋಬರ್ 30 ರಂದು ಅರೆಂಜ್ ಅಲರ್ಟ್ ನೀಡಲಾಗಿದೆ.
ಅರ್ನಾಬ್ ಚಂಡಮಾರುತದ ಪರಿಣಾಮವಾಗಿ ಜಾರ್ಖಂಡ್ನ ಕೆಲವು ಭಾಗಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತಗಳು ಎಚ್ಚರಿಕೆಯಿಂದ ಇರುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಗುರುವಾರ (ಅ.29) ರಾತ್ರಿಯಿಂದ ಶನಿವಾರದವರೆಗೆ (ಅ. 31) ಹಿಮಾಲಯ ಪ್ರದೇಶದಲ್ಲಿ ಅರ್ನಾಬ್ ಚಂಡಮಾರುತದಿಂದಾಗಿ ಭಾರಿ ಮಳೆ (Rain), ಹಿಮಪಾತವಾಗುವ ಸಂಭವ ಇದೆ. ಈ ಹಿನ್ನೆಲೆಯಲ್ಲಿ, ಎತ್ತರದ ಪ್ರದೇಶಗಳಿಗೆ ತೆರಳದಂತೆ ನೇಪಾಳದ ಅಧಿಕಾರಿಗಳು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಒಡಿಶಾದಲ್ಲಿ ಭಾರೀ ಮಳೆ
ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸುವ ಮುನ್ನವೇ ಭುವನೇಶ್ವರದಲ್ಲಿ ಇಂದು (ಅ.27) ಭಾರೀ ಮಳೆಯಾಗುತ್ತಿದೆ.
ಪುರಿ, ಗಜಪತಿ, ಗಂಜಾಂ, ರಾಯಗಡ, ಕೊರಾಪುಟ್ ಮತ್ತು ಮಲ್ಕನ್ಗಿರಿ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 12 ಸೆಂ.ಮೀ ನಿಂದ 20 ಸೆಂ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.
16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ಇಲ್ಲಿ 7 ಸೆಂ.ಮೀ ನಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಬಾಲಸೋರ್, ಭದ್ರಕ್, ಜಾಜ್ಪುರ, ಕೇಂದ್ರಪಾರ, ಕಟಕ್, ಕಿಯೋನ್ಜಾರ್, ಮಯೂರ್ಭಂಜ್, ಕಂಧಮಾಲ್, ಕಲಾಹಂಡಿ, ನಬರಂಗ್ಪುರ, ಖುರ್ದಾ, ನಯಾಗಢ, ಜಗತ್ಸಿಂಗ್ಪುರ, ನುವಾಪದ, ಬಲಂಗೀರ್ ಮತ್ತು ಬೌಧ್ ಸೇರಿವೆ.
ಚಂಡ ಮಾರುತದಿಂದ ಪರಿಣಾಮಕ್ಕೊಳಗಾಗುವ ಸ್ಥಳಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಅಂಗನವಾಡಿ ಸಹಾಯಕಿಯರು (AWHs) ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲೇ ಇರುವಂತೆ ಸೂಚಿಸಲಾಗಿದೆ. ಚಂಡಮಾರುತದ ಕಾರಣದಿಂದ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಟ್ಟರೂ, ಫಲಾನುಭವಿಗಳಿಗೆ ಪೌಷ್ಟಿಕಾಂಶ ಯುಕ್ತ ಆಹಾರ ನಿರಂತರವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಪಡಿತರವನ್ನು ನೇರವಾಗಿ ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗಳಿಗೆ ರಜೆ
ಒಡಿಶಾದ ಪುರಿ, ಜಗತ್ಸಿಂಗ್ಪುರ ಮತ್ತು ನಯಾಗಢದಲ್ಲಿ, ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಇಂದಿನಿಂದ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.
ನುವಾಪಡ ಜಿಲ್ಲೆಯಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ಎರಡು ದಿನಗಳ ರಜೆಯನ್ನು ಘೋಷಿಸಲಾಗಿದೆ. ಖೋರ್ಧಾ ಜಿಲ್ಲೆಯಲ್ಲಿ, ಅಂಗನವಾಡಿಯಿಂದ 12ನೇ ತರಗತಿಯವರೆಗಿನ ಶಾಲೆಗಳಿಗೆ ನಾಳೆ (ಅ.28) ರಜೆ ಘೋಷಿಸಲಾಗಿದೆ. ಆದಾಗ್ಯೂ, ಜಿಲ್ಲಾ ಶಿಕ್ಷಣಾಧಿಕಾರಿಗಳು (DEO) ಶಿಕ್ಷಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.
