Friday, 13th December 2019

ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ – ರವೀಂದ್ರ ಜಡೇಜಾ

ಲಂಡನ್: ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ಸೋತ ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಸೆಮಿಫೈನಲ್‍ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಮಾಡಿದ ಆಲ್‍ರೌಂಡರ್ ರವೀಂದ್ರ ಜಡೇಜಾ ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಮಂಗಳವಾರ ಮಳೆ ಬಂದ ಕಾರಣ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಅದರಂತೆ ಬುಧವಾರ ನಡೆದ ಪಂದ್ಯದಲ್ಲಿ ಭಾರತ 18 ರನ್ ಅಂತರದಲ್ಲಿ ಸೋತು ವಿಶ್ವಕಪ್‍ನಿಂದ ಹೊರ ಬಿತ್ತು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಈ ಪಂದ್ಯದ ಕುರಿತು ಟ್ವೀಟ್ ಮಾಡಿದ್ದು, ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ ಎಂದಿದ್ದಾರೆ.

ಭಾವನತ್ಮಾಕವಾಗಿ ಟ್ವೀಟ್ ಮಾಡಿರುವ ಜಡೇಜಾ, “ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ. ಅದನ್ನು ನಾನು ಎಂದಿಗೂ ಬಿಡುವುದಿಲ್ಲ. ನನ್ನ ಪ್ರೀತಿಯ ಮೂಲವಾದ ನನ್ನ ಅಭಿಮಾನಿಗಳಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನನಗೆ ಸದಾ ಸ್ಫೂರ್ತಿದಾಯಕವಾಗಿರಿ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ನನ್ನ ಕೈಯಲ್ಲಿ ಅದಷ್ಟೂ ಅತ್ಯುತ್ತಮ ಆಟ ಆಡುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಟವಾಡಿ ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡದತ್ತ ತಂದಿದ್ದರು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‍ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ಭಾರತಕ್ಕೆ 117 ಎಸೆತಗಳಲ್ಲಿ 148 ರನ್ ಗಳಿಸುವ ಅಗತ್ಯವಿತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಹತ್ತಿರ ತಂದಿಟ್ಟಿದ್ದರು. ಜಡೇಜಾ 39 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಗಳಿಂದ ಅರ್ಧ ಶತಕ ಪೂರ್ಣಗೊಳಿಸಿದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ನಲ್ಲಿ ನಂ.8ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧ ಶತಕ ಬ್ಯಾಟ್ಸ್ ಮನ್ ಸಿಡಿಸಿದ ಸಾಧನೆ ಮಾಡಿದರು. 5 ವರ್ಷಗಳ ಬಳಿಕ ಜಡೇಜಾ ಗಳಿಸಿದ ಏಕದಿನ ಅರ್ಧ ಶತಕ ಇದಾಗಿತ್ತು.

5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದಾಗ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‍ಗೆ ಶತಕದ ಜೊತೆಯಾಟ ನೀಡಿತ್ತು. 122 ಎಸೆತಗಳಲ್ಲಿ ಈ ಜೋಡಿ 116 ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್(4 ಬೌಂಡರಿ, 4 ಸಿಕ್ಸರ್) ಗಳಿಸಿ ಬೋಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸೆಯಾಗಿದ್ದ ಧೋನಿ 50 ರನ್(72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು.

ರವೀಂದ್ರ ಜಡೇಜಾ ಅವರ ಈ ಪ್ರದರ್ಶನಕ್ಕೆ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಿಟಲ್ ಮಾಸ್ಟರ್ ಸಚಿನ್ ಅವರು ಜಡೇಜಾ ಅವರ ವಿಶೇಷ ಆಟವನ್ನು ಶ್ಲಾಘಿಸಿದ್ದಾರೆ. ಈ ಉತ್ತಮ ಜೊತೆಯಾಟದ ಹಿಂದೆ ಧೋನಿ ಅವರ ಮಾರ್ಗದರ್ಶನವಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *