– ಅಪ್ಪನ ರಾಜಕೀಯ ಬದ್ಧವೈರಿ ಜೊತೆ ಫೋಟೋ
ರಾಮನಗರ: ಮಾಜಿ ಸಚಿವ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ. ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ (Congress) ನಾಯಕರ ಜೊತೆ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದಾರೆ. ಚನ್ನಪಟ್ಟಣ ಮೂಲದ ಕಾಂಗ್ರೆಸ್ ನಾಯಕ ರಘುನಂದನ್ ರಾಮಣ್ಣ (Raghunandan Ramanna) ಇಂದು ಬೆಂಗಳೂರು ಮೈಸೂರು ಇನ್ಸ್ಫಾಸ್ಟ್ರಕ್ಟರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ನಿಶಾ ಯೋಗೇಶ್ವರ್ ಭಾಗಿಯಾಗಿದ್ದಾರೆ. ಈ ವೇಳೆ ಸಿಪಿ ಯೋಗೇಶ್ವರ್ (C.P Yogeshwar) ರಾಜಕೀಯ ಬದ್ಧ ವೈರಿ ಸಂಸದ ಡಿ.ಕೆ. ಸುರೇಶ್ (D.K Suresh) ಜೊತೆ ನಿಂತು ಫೋಟೋ ತೆಗೆಸಿಕೊಂಡಿರುವ ನಿಶಾ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ, ಸುಮ್ಮನೆ ಕೂರೋದಕ್ಕಾಗುತ್ತಾ?: ವಿರೋಧಿಗಳಿಗೆ ದೊಡ್ಡಗೌಡ್ರು ಟಾಂಗ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಬಿಜೆಪಿ ಮತ್ತು ಜೆಡಿಎಸ್ (BJP- JDS) ಮೈತ್ರಿ ಅಭ್ಯರ್ಥಿಯಾಗಿ ಸಿ. ಪಿ. ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ ಎನ್ನುವ ಚರ್ಚೆ ಇದೆ. ಇದರ ನಡುವೆ ಯೋಗೇಶ್ವರ್ ಪುತ್ರಿ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಘುನಂದನ್ ರಾಮಣ್ಣನವರಿಗೆ ಶುಭಕೋರುವ ಸಲುವಾಗಿ ನಿಶಾ ಯೋಗೇಶ್ವರ್ ಕಚೇರಿಗೆ ಹೋಗಿದ್ದರು ಎನ್ನಲಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ನಿಶಾ ಯೋಗೇಶ್ವರ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಚರ್ಚೆಯೂ ಇದೆ. ಕಳೆದ ಕೆಲವು ದಿನಗಳ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರನ್ನೂ ಭೇಟಿ ಮಾಡಿದ್ದ ನಿಶಾ, ಈಗ ಮತ್ತೆ ಸಂಸದ ಸುರೇಶ್ ಜೊತೆ ಕಾಣಿಸಿಕೊಂಡಿರುವುದು ಚನ್ನಪಟ್ಟಣ ಭಾಗದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.