– ಮಂಡ್ಯದ ʻಪಬ್ಲಿಕ್ ಟಿವಿʼ ವರದಿಗಾರ ರೋಹಿತ್ ನೇತೃತ್ವದಲ್ಲಿ ಗೆದ್ದ ತಂಡ
ಮಡಿಕೇರಿ: ಮಳೆ ಮತ್ತು ಕತ್ತಲಿನ ನಡುವೆಯೂ ಕೊಡಗಿನಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ರೋಚಕ ಸಿನಿಮೀಯ ಕ್ಷಣಕ್ಕೆ ಸಾಕ್ಷಿಯಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಎರಡು ದಿನಗಳ ಪಂದ್ಯಾವಳಿಯಲ್ಲಿ ರಾಜ್ಯದ 22 ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು. ಫೈನಲ್ನಲ್ಲಿ ಕೊಡಗು ಅರೇಬಿಕಾ ಹಾಗೂ ಮಂಡ್ಯ ತಂಡಗಳು ಮುಖಾಮುಖಿಯಾಗಿದ್ದವು.
ಆದರೆ, ಭಾರಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಯಿತು. ಟ್ರೋಫಿ ವಿಜೇತರನ್ನ ನಿರ್ಧರಿಸಲು ಎರಡೂ ತಂಡಗಳ ಒಪ್ಪಿಗೆಯಂತೆ ಬಾಲ್ ಔಟ್ ನಡೆಸಲಾಯಿತು. ಕತ್ತಲಿನ ಕಾರಣ ಮೈದಾನದಲ್ಲಿದ್ದ ಕಾರುಗಳ ಹೆಡ್ಲೈಟ್ಗಳ ಬೆಳಕಿನಲ್ಲಿ ಬಾಲ್ ಔಟ್ ಪ್ರಕ್ರಿಯೆ ನಡೆಯಿತು. ಅಂತಿಮವಾಗಿ 1-0 ಅಂತರದಲ್ಲಿ ಮಂಡ್ಯ ತಂಡ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು.
ಶಾಸಕರಾದ ಎ.ಎಸ್ ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ವಿಜೇತ ಹಾಗೂ ರನ್ನರ್ ಅಪ್ ತಂಡಗಳಿಗೆ ನಿಗದಿಯಾಗಿದ್ದ ಒಂದೂವರೆ ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಮಾನವಾಗಿ ಹಂಚಲಾಯಿತು. ಬಾಗಲಕೋಟೆ ತೃತೀಯ ಹಾಗೂ ಚಿಕ್ಕಬಳ್ಳಾಪುರ ತಂಡ ನಾಲ್ಕನೇ ಸ್ಥಾನ ಪಡೆದವು.
ಕಾರುಗಳ ಹೆಡ್ಲೈಟ್ ಬೆಳಕಿನಲ್ಲಿ ನಡೆದ ಈ ವಿಶಿಷ್ಟ ಬಾಲ್ ಔಟ್ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯ ಮರೆಯಲಾಗದ ಕ್ಷಣವಾಗಿ ಉಳಿಯಿತು.
