ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (US Midterm Elections) ರಿಪಬ್ಲಿಕನ್ ಪಕ್ಷ ಅನುಭವಿಸಿರುವ ಭಾರೀ ಸೋಲಿಗೆ ಇರಾನ್ ಯುದ್ಧವೇ ಪ್ರಮುಖ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ಹೇಳಿದ್ದಾರೆ.
2024ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ತಮ್ಮನ್ನು ಬೆಂಬಲಿಸಿದ್ದ ಅನೇಕ ಮತದಾರರು 2026ರ ಚುನಾವಣೆಯಲ್ಲಿ ಪಕ್ಷ ಬದಲಿಸಿ ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದಾರೆ. ಇರಾನ್ ಸಂಘರ್ಷ, ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಇಸ್ರೇಲ್ ಜೊತೆಗಿನ ಅಮೆರಿಕದ ಸಂಬಂಧದ ಬಗ್ಗೆ ಮತದಾರರಲ್ಲಿ ಅಸಮಾಧಾನವಿತ್ತು ಎಂದು ವ್ಯಾನ್ಸ್ ಸೋಲಿಗೆ ಕಾರಣಗಳನ್ನ ವಿವರಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವ್ಯಾನ್ಸ್, ರಿಪಬ್ಲಿಕನ್ ಪಕ್ಷದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ಬಂದಿದ್ದರೂ, ಅವರಲ್ಲಿ ಬಹುತೇಕರು ಡೆಮಾಕ್ರಟಿಕ್ ಪಕ್ಷವನ್ನ ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಮತದಾರರು ಮತಗಟ್ಟೆಗೆ ಬಂದಿದ್ದರು. ಆದ್ರೆ, ಮುಖ್ಯ ಸಮಸ್ಯೆ ಮತದಾನದ ಪ್ರಮಾಣವಲ್ಲ. 2024ರಲ್ಲಿ ಟ್ರಂಪ್ ಮತ್ತು ವ್ಯಾನ್ಸ್ ಅವರನ್ನ ಬೆಂಬಲಿಸಿದ್ದ ಬಹುತೇಕ ಮತದಾರರು ಈ ಬಾರಿ ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಿದ್ದಾರೆ, ಇದೇ ದೊಡ್ಡ ಸಮಸ್ಯೆಯಾಗಿದೆ. ಚುನಾವಣಾ ವಿಶ್ಲೇಷಕರು ಆರಂಭದಲ್ಲಿ ರಿಪಬ್ಲಿಕನ್ ಪಕ್ಷದ ಪರ ಆಶಾದಾಯಕ ವರದಿಗಳನ್ನ ನೀಡಿದ್ದರು. ಹಲವು ರಾಜ್ಯಗಳಲ್ಲಿ ಮತದಾನದ ಪ್ರಮಾಣ ಉತ್ತಮವಾಗಿತ್ತು, ಕೆಲವು ಕಡೆ ನಿರೀಕ್ಷೆಗೂ ಮೀರಿತ್ತು. ಆದರೆ, ತಾವು ಸಂಪರ್ಕಿಸಿದ್ದ ಚುನಾವಣಾ ಸಮೀಕ್ಷೆಗಾರರೊಬ್ಬರು 2024ರಲ್ಲಿ ಟ್ರಂಪ್ ಅವರನ್ನು ಬೆಂಬಲಿಸಿದ್ದ ಗಣನೀಯ ಸಂಖ್ಯೆಯ ಮತದಾರರು ಈ ಬಾರಿ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು, ಡೆಮಾಕ್ರಟಿಕ್ ಪಕ್ಷಕ್ಕೆ ಮತ ಹಾಕಲು ನಿರ್ಧರಿಸಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು ಎಂಬುದನ್ನು ವ್ಯಾನ್ಸ್ ಬಹಿರಂಗಪಡಿಸಿದ್ದಾರೆ.
ಜೊತೆಗೆ ರಿಪಬ್ಲಿಕನ್ ಪಕ್ಷದಿಂದ ದೂರ ಸರಿದ ಮತದಾರರನ್ನು ಮತ್ತೆ ಪಕ್ಷದತ್ತ ಸೆಳೆಯಲು ಏನು ಮಾಡಬೇಕು? ಎಂದು ಸಮೀಕ್ಷೆಗಾರರು ಪ್ರಶ್ನಿಸಿದರು. ಇದಕ್ಕೆ 4 ಪ್ರಮುಖ ವಿಚಾರಗಳನ್ನು ವ್ಯಾನ್ಸ್ ಪ್ರಸ್ತಾಪಿಸಿದ್ರು. ಇರಾನ್ ಜೊತೆಗಿನ ಯುದ್ಧವನ್ನ ಅಂತ್ಯಗೊಳಿಸುವುದು. ಜೀವನ ವೆಚ್ಚ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ ನೀಡುವುದು. ಅಮೆರಿಕದ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುವುದು. ಇಸ್ರೇಲ್ ಜೊತೆಗಿನ ಅಮೆರಿಕದ ಸಂಬಂಧದಲ್ಲಿ ಬದಲಾವಣೆ ತರುವುದು ಅಂತಾ ವ್ಯಾನ್ಸ್ ತಿಳಿಸಿದ್ದಾರೆ. ಇದೇ ವೇಳೆ ಯುದ್ಧಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದ ಸಂಪ್ರದಾಯವಾದಿ ರಾಜಕೀಯ ವಿಶ್ಲೇಷಕಿ ರೇಚೆಲ್ ಕ್ಯಾಂಪೋಸ್-ಡಫಿ ಅವರ ನಿಲುವನ್ನೂ ವ್ಯಾನ್ಸ್ ಸಮರ್ಥಿಸಿಕೊಂಡಿದ್ದಾರೆ.
ನಾವು ಸೋಲಲು ಯುದ್ಧವೇ ಕಾರಣ. ಅಧ್ಯಕ್ಷರೂ ಕೂಡ ನಿನ್ನೆ ರಾತ್ರಿ ಇದೇ ವಿಚಾರವನ್ನ ಹೇಳಿದ್ದಾರೆ. ಪಕ್ಷದ ಭವಿಷ್ಯದ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸುವುದಾದ್ರೆ ಮೊದಲು ಇರಾನ್ ಸಂಘರ್ಷದ ವಿಚಾರವನ್ನೇ ಪರಿಗಣಿಸಬೇಕು ಎಂದಿದ್ದಾರೆ.
ಸುಳ್ಳು ಸಮರ್ಥನೆ ಬೇಡ
ಚುನಾವಣೆಯಲ್ಲಿನ ಸೋಲಿಗೆ ಕಾರಣವೇನು ಎಂಬ ವಿಚಾರವಾಗಿ ರಿಪಬ್ಲಿಕನ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಮತ್ತು ವಾದ-ಪ್ರತಿವಾದಗಳು ನಡೆಯುವುದು ಸಹಜ. ಆದರೆ, ಸೋಲಿನ ನೈಜ ಕಾರಣಗಳನ್ನ ಮರೆಮಾಚಿ ಬೇರೆ ವಿಚಾರಗಳನ್ನು ಮುಂದಿಡುವ ಪ್ರಯತ್ನ ಮಾಡಬಾರದು. ಮುಂದಿನ 6 ವರ್ಷಗಳ ಕಾಲ ಸೆನೆಟ್ ಮೇಲಿನ ನಿಯಂತ್ರಣವನ್ನ ಕಳೆದುಕೊಳ್ಳುವುದು ಯುದ್ಧಕ್ಕಾಗಿ ನೀಡಬಹುದಾದ ಸೂಕ್ತ ಬೆಲೆ ಎಂದು ನಿಮಗೆ ಅನಿಸಿದ್ರೆ, ಅದನ್ನು ಬಹಿರಂಗವಾಗಿಯೇ ವಾದಿಸಿ. ಅಷ್ಟೊಂದು ರಾಜಕೀಯ ನಷ್ಟ ಅನುಭವಿಸುವುದು ಯುದ್ಧಕ್ಕಾಗಿ ಯೋಗ್ಯವಾದ ಬೆಲೆಯಾಗಿತ್ತು ಎಂದು ಸಮರ್ಥಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

