Connect with us

Dharwad

ಸೆಮಿ ಲಾಕ್‍ಡೌನ್ ವೇಳೆ ಬಡವರಿಗೆ ಆಸರೆಯಾದ ನರೇಗಾ

Published

on

ಹುಬ್ಬಳ್ಳಿ: ದೇಶಾದ್ಯಂತ ಕೋವಿಡ್ ಎರಡನೇ ಉಗ್ರ ರೂಪ ತಾಳಿದೆ. ರಾಜ್ಯ ಸರ್ಕಾರ ಕೋವಿಡ್ ಸೋಂಕು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಸೆಮಿ ಲಾಕ್‍ಡೌನ್ ಘೋಷಿಸಿದೆ. ಮಹಾನಗರ ಹಾಗೂ ಪಟ್ಟಣಗಳಲ್ಲಿ ಆರ್ಥಿಕ ಚಟುವಟಿಕೆಗಳು ಮಂದವಾಗಿವೆ. ಪಟ್ಟಣದಲ್ಲಿ ಉದ್ಯೋಗ ಅರಿಸಿ ಹೋಗುವವರಿಗೆ ಉದ್ಯೋಗ ಲಭ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ಗ್ರಾಮೀಣ ಭಾಗದ ಜನರ ಕೈಗಳಿಗೆ ಕೆಲಸ ನೀಡುವುದರೊಂದಿಗೆ, ಜಲಶಕ್ತಿ ಅಭಿಯಾನದ ಮೂಲಕ ಮಳೆ ನೀರು ಹಿಡಿದಿಡುವ ಗಂಗಾವತರಣ ಕಾರ್ಯ ಸಹ ಮುಂದುವರಿದಿದೆ.

ಹುಬ್ಬಳ್ಳಿ ತಾ.ಪಂ. ವ್ಯಾಪ್ತಿಯಲ್ಲಿ ಈ ವರ್ಷ ಜಲಶಕ್ತಿ ಅಭಿಯಾನದಡಿ 1,964 ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ 250 ಕಾಮಗಾರಿಗಳು ಆರಂಭವಾಗಿವೆ. ಹುಬ್ಬಳ್ಳಿ ತಾ.ಪಂ. ವ್ಯಾಪ್ತಿಯಲ್ಲಿ ವಾರ್ಷಿಕ 3.75 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದೆ. ಏಪ್ರಿಲ್ ತಿಂಗಳಲ್ಲಿ 37,314 ಮಾನವ ದಿನಗಳ ಗುರಿ ನಿಗದಿಪಡಿಸಿಕೊಂಡಿದ್ದು, 15,558 ಮಾನವ ದಿನ ಕಾರ್ಯ ಪೂರ್ಣಗೊಳಿಸಿ ಶೇ.42ರಷ್ಟು ಸಾಧನೆ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ತಾ.ಪಂ. ಇಒ ಗಂಗಾಧರ ಕಂದಕೂರ, ಮಹಿಳಾ ಕಾಯಕೋತ್ಸವ ಹಾಗೂ ದುಡಿಯೋಣು ಬಾರಾ ಅಭಿಯಾನದ ಮೂಲಕ ಸಾಕಷ್ಟು ಜನರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ. ಕೋವಿಡ್ ಮುಂಜಾಗೃತವಾಗಿ ಕೂಲಿಕಾರರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಲಾಗಿದೆ. ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕುಸಗಲ್ ಗ್ರಾಮದಲ್ಲಿ 50 ಕೂಲಿಕಾರರು ಬದು ನಿರ್ಮಾಣದಲ್ಲಿ ತೊಡಗಿದ್ದಾರೆ. ಇದರಿಂದ ಮಳೆಯ ನೀರು ಸಂಗ್ರಹವಾಗಲು ಅವಕಾಶವಾಗಿದೆ. ಜಲಶಕ್ತಿ ಅಭಿಯಾನದಡಿ ಕೃಷಿ ಹೊಂಡ, ಬದು ನಿರ್ಮಾಣ, ಸೋಕ್ ಪಿಟ್, ಪೌಷ್ಟಿಕ ತೋಟ, ಬಾರ್ಡರ್ ಚಕ್, ವೈಯಕ್ತಿಕ ಬೋರ್‍ವೆಲ್ ಮರುಪೂರಣ, ದನ, ಮೇಕೆ, ಕೋಳಿ ಷೆಡ್ ಕಾರ್ಯಕ್ರಮಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮಸ್ಥರು ಸಹ ಉತ್ತಮ ಸ್ಪಂದನೆ ತೋರುತ್ತಿದ್ದಾರೆ ಎಂದರು.

ತಾ.ಪಂ. ಸಹಾಯಕ ನಿರ್ದೇಶಕ ಪಾಂಡುರಂಗ ಕರಿಯಪ್ಪಹಟ್ಟಿ ಮಾತನಾಡಿ, ಕುಸುಗಲ್ ಗ್ರಾಮದಲ್ಲಿ 10 ತಂಡಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿವೆ. ಬದು ನಿರ್ಮಾಣ ಸಂದರ್ಭದಲ್ಲಿ ಮಾರ್ಗದರ್ಶಿ ಸೂಚಿ ಅನುಸಾರ ಇಬ್ಬರು ಕೂಲಿಕಾರರಿಗೆ ಕೆಲಸ ನಿರ್ವಹಸಿಲು ಅನುವು ಮಾಡಿಕೊಡಲಾಗಿದೆ. ಕುಸುಗಲ್ ಗ್ರಾಮಕ್ಕೆ ಹುಬ್ಬಳ್ಳಿ ನಗರ ಹತ್ತಿರದಲ್ಲಿ ಇದ್ದರೂ ಸೆಮಿ ಲಾಕ್‍ಡೌನ್‍ನಿಂದ ಕೆಲಸ ದೊರಕುತ್ತಿಲ್ಲ. ಈ ಸಂದರ್ಭದಲ್ಲಿ ನರೇಗಾ ಗ್ರಾಮೀಣ ಜನರಿಗೆ ಅನುಕೂಲವಾಗಿದೆ ಎಂದರು.

ಕೂಲಿಕಾರ ಖಾದರ್ ಸಾಬ್ ನದಾಫ್ ಮಾತನಾಡಿ, ಯೋಜನೆಯಿಂದ ಕುಟುಂಬ ನಿರ್ವಹಣೆ ಸಹಾಯಕವಾಗಿದೆ. ಕೆಲಸದ ಸ್ಥಳದಲ್ಲಿ ನಮಗಾಗಿ ಮಾಸ್ಕ್ ಸ್ಯಾನಿಟೈಸರ್, ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯದ ಕಫ್ರ್ಯೂ ಸಮಯದಲ್ಲಿಯೂ ಕೂಡ ನಮಗೆ ಕೆಲಸ ದೊರೆತು ಅನುಕೂಲವಾಗಿದೆ ಎಂದುರು.

Click to comment

Leave a Reply

Your email address will not be published. Required fields are marked *