– ʻಕಾಂಗ್ರೆಸ್ ಮಕ್ಕಳು ಗಾಂಧೀಜಿ ಮಕ್ಕಳು, ಬಿಜೆಪಿ ಮಕ್ಕಳು- ಕಳ್ನನ್ ಮಕ್ಕಳುʼ ಅಂತಾ ಪೋಸ್ಟರ್
ಶಿವಮೊಗ್ಗ: ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪೋಸ್ಟರ್ ವಾರ್ ಇದೀಗ ಮಲೆನಾಡು ಶಿವಮೊಗ್ಗ (Shivamogga) ಜಿಲ್ಲೆಗೂ ಕಾಲಿಟ್ಟಿದೆ. ಶಿವಮೊಗ್ಗ ನಗರದ ವಿವಿಧೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು (Congress Workers) ಪೋಸ್ಟರ್ಗಳನ್ನ ಅಂಟಿಸುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ದೀನದಯಾಳ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬೈಪಾಸ್ ರಸ್ತೆಯ ಸಮೀಪವಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ‘ಮೈತ್ರಾದೇವಿ’ ನಿವಾಸದ ಕಾಪೌಂಡ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸಿ ಕೆಣಕಿದ್ದಾರೆ.
ʻಕಾಂಗ್ರೆಸ್ ಮಕ್ಕಳು ಗಾಂಧೀಜಿಯ ಮಕ್ಕಳು, ಬಿಜೆಪಿ ಮಕ್ಕಳು ಕಳ್ಳನನ್ನ ಮಕ್ಕಳುʼ ಎಂಬ ಬರಹವಿರುವ ಪೋಸ್ಟರ್ಗಳನ್ನ ಅಳವಡಿಸಲಾಗಿದೆ. ಜಿಲ್ಲಾ ಬಿಜೆಪಿ ಕಚೇರಿಯ ಬಾಗಿಲಿನ ಶಟ್ಟರ್, ಗೋಡೆ ಸೇರಿದಂತೆ ವಿವಿಧೆಡೆ ಹಾಗೂ ಬಿ.ವೈ. ವಿಜಯೇಂದ್ರ (BY Vijayendra) ಅವರ ನಿವಾಸದ ಕಾಪೌಂಡ್ಗೆ ಪೋಸ್ಟರ್ಗಳನ್ನ ಅಂಟಿಸಲಾಗಿದೆ. ನಿನ್ನೆ ತಡರಾತ್ರಿ ಎರಡು ಕಡೆಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಅವರ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್ ವಾರ್ ನಡೆಸಿದ್ದಾರೆ.
ಪೋಸ್ಟರ್ ತೆರವಿಗೆ ಮುಂದಾದ ಬಿಜೆಪಿ ಕಾರ್ಯಕರ್ತರು
ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿ ಹಾಗೂ ಬಿ.ವೈ. ವಿಜಯೇಂದ್ರ ಅವರ ನಿವಾಸಕ್ಕೆ ಪೋಸ್ಟರ್ ಅಂಟಿಸಿದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಿಜೆಪಿ ಕಚೇರಿಗೆ ಆಗಮಿಸಿ ಪೋಸ್ಟರ್ಗಳನ್ನು ವೀಕ್ಷಿಸಿದರು.
ಇದೇ ವೇಳೆ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕೂಡ ಬಿಜೆಪಿ ಕಚೇರಿಗೆ ದೌಡಾಯಿಸಿದರು. ಇನ್ಸ್ಪೆಕ್ಟರ್ ಸತ್ಯನಾರಾಯಣ್ ಅವರು ಕಚೇರಿಗೆ ಅಂಟಿಸಿದ್ದ ಪೋಸ್ಟರ್ಗಳನ್ನು ವೀಕ್ಷಿಸಿದರು. ಇನ್ಸ್ಪೆಕ್ಟರ್ ವೀಕ್ಷಣೆ ಮಾಡಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಕಚೇರಿಯ ಎದುರು ಅಂಟಿಸಿದ್ದ ಪೋಸ್ಟರ್ಗಳನ್ನು ತೆರವುಗೊಳಿಸಿದರು.
ಇಂತಹ ಕೃತ್ಯವನ್ನು ಸಹಿಸಲ್ಲ: ಜಗದೀಶ್ ಎಚ್ಚರಿಕೆ
ಈ ಕುರಿತು ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿದ್ದಾರೆ. ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಗುಂಡಾಗಿರಿ ಮಾಡುತ್ತಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರ ನಡೆ ಖಂಡನೀಯ ಎಂದರು. ಈ ರೀತಿಯ ಕೃತ್ಯಗಳನ್ನು ಬಿಜೆಪಿ ಕಾರ್ಯಕರ್ತರ ಪಡೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.

