– ಒಂದೇ ಕಡೆ ಅಂತ್ಯಕ್ರಿಯೆಗೆ ತೀರ್ಮಾನ
ಬೆಂಗಳೂರು/ಮೈಸೂರು: 7 ಮಂದಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಬೆನ್ನಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದ (Chamundi Hills) ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2 ದಿನಗಳ ಹಿಂದೆಯೇ ಸೇಲಂನ ಘಾಟ್ ಕಾಡಿನಲ್ಲಿ ಹಂತಕ ಇಂದುಶೇಖರ್ ಪತ್ನಿ ಸುನೀತಾ ಹಾಗೂ ರೂಪವತಿ ಮೃತದೇಹ ಪತ್ತೆಯಾಗಿದ್ದವು. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದವು. ಇದೀಗ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಹಾಗೂ ದಿವ್ಯಾ ದಂಪತಿಯ ಮೃತದೇಹ ಪತ್ತೆಯಾಗಿದೆ. ಅಲ್ಲಿಗೆ ಒಟ್ಟಾರೆ ಐವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೆರಡು ಮೃತದೇಹಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹತ್ಯೆಯಾದ ಬಾಲಕ ಪುನೀತ್ ಅಂತ್ಯಕ್ರಿಯೆಯನ್ನ ಶನಿವಾರ (ನ.7) ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಲಾಗಿತ್ತು. ಇನ್ನುಳಿದ ನಾಲ್ಕು ಮೃತದೇಹಗಳ ಅಂತ್ಯಕ್ರಿಯೆಯನ್ನ ಒಂದೇ ಕಡೆ ನಡೆಸಲು ತೀರ್ಮಾನಿಸಲಾಗಿದೆ.
ಸದ್ಯ ಸೇಲಂ ನಲ್ಲಿ ಪತ್ತೆಯಾದ ಇಂದುಶೇಖರ್ ಪತ್ನಿ ಹಾಗೂ ಅತ್ತೆಯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಮೈಸೂರಲ್ಲಿ ನಡೆಯಲಿದೆ. ಸಂಜೆ ವೇಳೆಗೆ ನಾಲ್ಕು ಮೃತದೇಹಗಳನ್ನ ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ʻಪಬ್ಲಿಕ್ ಟಿವಿʼಗೆ ತಿಳಿಸಿವೆ.

