– ಜೈಲಿನಲ್ಲೇ ಕೊನೆಯುಸಿರೆಳೆದಿದ್ದ ರೌಡಿಶೀಟರ್ ಬೆಳತೂರು ರಮೇಶ್
ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದಿರುವ ಹಂತಕ ಇಂದುಶೇಖರ್ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಕುತೂಹಲಕಾರಿ ತಿರುವು ಸಿಕ್ಕಿದೆ. ಇಂದುಶೇಖರ್ನ ಸ್ವಂತ ಅಣ್ಣನೇ ಹಿಂದೆ ಭೀಕರ ಡಬಲ್ ಮರ್ಡರ್ (Double Murder) ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಣ್ಣನ ಕ್ರಿಮಿನಲ್ ಹಿನ್ನೆಲೆ ಹಾಗೂ ಆತ ನಡೆಸಿದ್ದ ಕೊಲೆ ಪ್ರಕರಣ ಈಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
15 ಕೋಟಿ ಆಸ್ತಿಗಾಗಿ ಡಬಲ್ ಮರ್ಡರ್
ಇಂದುಶೇಖರ್ನ ಅಣ್ಣ ಬೆಳತೂರು ರಮೇಶ್ ಕಾಡುಗೋಡಿ ಪೊಲೀಸ್ ಠಾಣೆ (Kadugodi Police Station) ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಆಗಿದ್ದ. ಸುಮಾರು 8 ವರ್ಷಗಳ ಹಿಂದೆ ಬೆಂಗಳೂರಿನ ಬೆಳತೂರು ಸಮೀಪದ 1.8 ಎಕರೆ ಜಮೀನಿಗಾಗಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ರಮೇಶ್ ಆರೋಪಿಯಾಗಿದ್ದ. ಈ ಜಮೀನಿನ ಮೌಲ್ಯ ಸುಮಾರು 15 ಕೋಟಿ ರೂಪಾಯಿ ಇತ್ತು. ಬೆಳತೂರಿನಲ್ಲಿ ನಂಜಪ್ಪ ಎಂಬುವರಿಗೆ ಸೇರಿದ ಈ ಜಮೀನು ಇತ್ತು. ನಂಜಪ್ಪ ಅವರು ವಯೋಸಹಜ ಕಾರಣಗಳಿಂದ ಮೃತಪಟ್ಟಿದ್ದರು. ಬಳಿಕ ಅನಾಥವಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿನ ಮೇಲೆ ರಮೇಶ್ ಕಣ್ಣಿಟ್ಟಿದ್ದ.
ಜಮೀನನ್ನು ಕಬಳಿಸುವ ಉದ್ದೇಶದಿಂದ ವೆಂಕಟರಮಣ ಎಂಬಾತನನ್ನ ಕರೆತಂದು ಆತನನ್ನೇ ನಂಜಪ್ಪ ಎಂದು ಬಿಂಬಿಸಿದ್ದ. ಬಳಿಕ ಆತನ ಹೆಸರಿನಲ್ಲಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ವಿಲ್ ಮಾಡಿಸಿಕೊಂಡಿದ್ದ. ಇದಾದ ಬಳಿಕ ಕೃಷ್ಣಪ್ಪ (65) ಎಂಬ ಮತ್ತೊಬ್ಬ ವ್ಯಕ್ತಿಯನ್ನ ಕರೆತಂದ ರಮೇಶ್, ನಕಲಿ ನಂಜಪ್ಪನನ್ನಾಗಿ ಬಿಂಬಿಸಿದ್ದ ವ್ಯಕ್ತಿಗೆ ಬೇಧಿ ಮಾತ್ರೆ ನೀಡಿ ಕೊಲೆ ಮಾಡಿದ್ದ. ಆತನ ಸಾವಿನ ಬಳಿಕ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರವನ್ನೂ ಸೃಷ್ಟಿಸಿದ್ದ. ಈ ಕೊಲೆ ಕೃತ್ಯದ ಸಂದರ್ಭದಲ್ಲಿ ರಮೇಶ್ ಜೊತೆ ವೆಂಕಟಸ್ವಾಮಿ ಎಂಬಾತನೂ ಇದ್ದ. ಈತ ರಮೇಶ್ ತೋಟದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಭೀಕರ ಕೃತ್ಯದ ವಿಚಾರವನ್ನು ವೆಂಕಟಸ್ವಾಮಿ ತನ್ನ ಪತ್ನಿ ಸುಧಾರಾಣಿಗೆ ತಿಳಿಸಿದ್ದ. ಕೊಲೆ ಕೃತ್ಯವನ್ನು ವಿರೋಧಿಸಿದ್ದ ಸುಧಾರಾಣಿ, ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು.
ಹೆಂಡ್ತಿಯನ್ನ ಬೆಂಕಿ ಹಚ್ಚಿ ಕೊಲೆ
ಇದೇ ಕಾರಣಕ್ಕೆ ಸುಧಾರಾಣಿಯನ್ನ ಮನೆಯಲ್ಲೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಬಳಿಕ ಆಕೆಯ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದ. ಆದರೆ ತನಿಖೆಯ ವೇಳೆ ಸುಧಾರಾಣಿಯದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಅಂಶ ಬಯಲಾಗಿತ್ತು. ಈ ಪ್ರಕರಣದಲ್ಲಿ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಜೈಲಿನಲ್ಲೇ ಕೊನೆಯುಸಿರೆಳೆದಿದ್ದ ರಮೇಶ್
ವರ್ತೂರು ಭಾಗದಲ್ಲಿ ಭೂಮಾಫಿಯಾ ನಡೆಸುತ್ತಿದ್ದ ರಮೇಶ್ ವಿರುದ್ಧ ನಕಲಿ ದಾಖಲೆ ಸೃಷ್ಟಿ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಿದ್ದವು. ಈ ಹಿನ್ನೆಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು. ಸುಮಾರು 3 ವರ್ಷಗಳ ಕಾಲ ಜೈಲಿನಲ್ಲಿದ್ದ ರಮೇಶ್, 2021ರಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದ.
ಒಂದೆಡೆ 15 ಕೋಟಿ ರೂಪಾಯಿ ಮೌಲ್ಯದ ಜಮೀನಿಗಾಗಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ಅಣ್ಣ ಬೆಳತೂರು ರಮೇಶ್ ಹೆಸರು ಕೇಳಿಬಂದಿದ್ದರೆ, ಮತ್ತೊಂದೆಡೆ ಇದೀಗ ಏಳು ಕೊಲೆ ಪ್ರಕರಣದಲ್ಲಿ ಇಂದುಶೇಖರ್ ಆರೋಪಿಯಾಗಿದ್ದಾನೆ. ಇಬ್ಬರ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪಗಳು ರಾಜ್ಯದಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿವೆ.


