ನವದೆಹಲಿ: ಇಂದಿನಿಂದ ಮೂರು ದಿನ ಇಡೀ ದೇಶಾದ್ಯಂತ ದೀಪಾವಳಿ ಹಬ್ಬದ (Deepavali Festival) ಸಂಭ್ರಮ ಮನೆ ಮಾಡಿದೆ. ಆದ್ರೆ ಕಳೆದ ಕೆಲ ದಿನಗಳಿಂದ ವಾಯುಗುಣಮಟ್ಟದ ಕೊರತೆ ಎದುರಿಸುತ್ತಿರುವ ದೆಹಲಿಯು ದಟ್ಟಹೊಗೆ (Delhi Smog), ಮಂಜಿನ ಹೊದಿಕೆಯಿಂದ ಮುಚ್ಚಿಕೊಂಡಂತಿದೆ.
ದೆಹಲಯ ಹಲವು ಭಾಗಗಳಲ್ಲಿ ವಾಯುಗುಣಮಟ್ಟವು ಅತ್ಯಂತ ಕಳಪೆಯಾಗಿ ಮುಂದುವರಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಮಾಹಿತಿ ಪ್ರಕಾರ, ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (AQI) 398 ರಷ್ಟಿದ್ದು, ಇದು 400ರ ಗಡಿ ತಲುಪುವ ಹಂತದಲ್ಲಿದೆ. ಅಷ್ಟೇ ಅಲ್ಲದೇ ಅಕ್ಷರಧಾಮ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಕ್ಯೂಐ 336 ದಾಖಲಾದರೆ, ಆನಂದ್ ವಿಹಾರ್ನಲ್ಲಿ 328ರಷ್ಟು ದಾಖಲಾಗಿದೆ.
ದೀಪಾವಳಿ ಹಬ್ಬದ ಮೊದಲ ದಿನವಾದ ಇಂದು ಮುಂಜಾನೆಯೇ ಇಂಡಿಯಾ ಗೇಟ್ ಮತ್ತು ಅಕ್ಷರಧಾಮದ ಸುತ್ತಮುತ್ತಲಿನ ಪ್ರದೇಶಗಳು ದಟ್ಟ ಹೊಗೆಮಂಜಿನಿಂದ ಆವೃತವಾಗಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.
ಸಾಮಾನ್ಯವಾಗಿ 301 ರಿಂದ 400ರ ವರೆಗಿನ ಎಕ್ಯೂಐ ಇದ್ದರೆ ಅತ್ಯಂತ ಕಳಪೆ (Very Poor), 400ಕ್ಕಿಂತ ಹೆಚ್ಚು ಮೌಲ್ಯಾಂಕ ಇದ್ದರೆ ‘ತೀವ್ರ ಕಳಪೆ’ (Severe) ಎಂದು ವಿಂಗಡಿಸಲಾಗುತ್ತದೆ. ನಗರದ ಸರಾಸರಿ ಮಾಲಿನ್ಯ ಮಟ್ಟವು ತೀವ್ರ ಕಳಪೆ ಹಂತಕ್ಕೆ ತಲುಪದಿದ್ದರೂ, ಅತ್ಯಂತ ಕಳಪೆಯನ್ನು ದಾಖಲಿಸಿದೆ.

