ಅಯೋಧ್ಯೆ: ದೇಣಿಗೆ ಕಳ್ಳತನದ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲೇ ರಾಮಮಂದಿರಕ್ಕೆ (Ram Mandir) ಹೊರಟಿದ್ದ ಉತ್ತರ ಪ್ರದೇಶದ (Uttar Pradesh) ಕಾಂಗ್ರೆಸ್ (Congress) ಅಧ್ಯಕ್ಷ ಅಜಯ್ ರೈ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.
ಅಜಯ್ ರೈ ಮಂಗಳವಾರ ರಾಮಮಂದಿರ ದರ್ಶನಕ್ಕಾಗಿ ಪಕ್ಷದ ಸಂಸದರು ಮತ್ತು ನಾಯಕರ ನಿಯೋಗದ ನೇತೃತ್ವ ವಹಿಸಬೇಕಿತ್ತು. ಸೋಮವಾರ (ಜೂ.29) ರಾತ್ರಿ ಅಯೋಧ್ಯೆಗೆ ಬಂದ ಅವರನ್ನು ಹೋಟೆಲ್‌ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ರೈ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಅಯೋಧ್ಯೆಯ ಹೋಟೆಲ್ ಪದಮ್ ಶ್ರೀ ಪ್ಯಾಲೇಸ್‌ನಲ್ಲಿ ತಮ್ಮನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನದಲ್ಲಿ ನನ್ನ ಪಾತ್ರ ಇಲ್ಲ: ಪೊಲೀಸರ ವಿಚಾರಣೆ ವೇಳೆ ಚಂಪತ್ ರೈ ಹೇಳಿಕೆ

ನಾವು ಶ್ರೀರಾಮನ ಆಶೀರ್ವಾದ ಪಡೆಯಲು ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಿದ್ದೆವು. ದರ್ಶನಕ್ಕಾಗಿ ಕಾಂಗ್ರೆಸ್ ನಾಯಕರ ನಿಯೋಗದ ನೇತೃತ್ವ ವಹಿಸಲು ನಾನು ನಿರ್ಧರಿಸಿದ್ದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ (BJP) ದೇಣಿಗೆ ಕಳ್ಳತನ ಹಾಗೂ ಭೂ ಹಗರಣಗಳ ಮೂಲಕ ಈ ಪವಿತ್ರ ಸ್ಥಳಕ್ಕೆ ತಂದಿರುವ ಅಪಖ್ಯಾತಿಯ ಬಗ್ಗೆ ಭಗವಂತನಲ್ಲಿ ಪ್ರಾರ್ಥಿಸಲು ಬಯಸಿದ್ದೆವು ಎಂದು ರೈ ಹೇಳಿಕೊಂಡಿದ್ದಾರೆ.
ತಡರಾತ್ರಿ ಕಾಂಗ್ರೆಸ್ ನಾಯಕರನ್ನು ಆಚಾರ್ಯ ನರೇಂದ್ರ ದೇವ್ ವಿಶ್ವವಿದ್ಯಾಲಯದ ಅತಿಥಿ ಗೃಹಕ್ಕೆ ಸ್ಥಳಾಂತರಿಸಲಾಯಿತು. ನಮಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ದೇವಸ್ಥಾನಕ್ಕೆ ಭೇಟಿ ನೀಡದಂತೆ ತಡೆಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಅಜಯ್ ರೈ ಅವರು ಹೋಟೆಲ್ ರೂಮ್‌ನಲ್ಲಿ ಇರುವುದು ಹಾಗೂ ಅಲ್ಲಿ ಪೊಲೀಸರು ಇರುವುದು ದಾಖಲಾಗಿದೆ. ಹೋಟೆಲ್ ಹೊರಗೆ ಸಹ ಪೊಲೀಸ್ ಸಿಬ್ಬಂದಿ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹಿಂದೂಗಳ ಪ್ರಾರ್ಥನೆಗೆ ತಡೆ – ಕಿಶೋರಿ ಲಾಲ್ ಶರ್ಮಾ ಕಿಡಿ
ನಿಯೋಗದ ಭಾಗವಾಗಿದ್ದ ಅಮೇಥಿಯ ಕಾಂಗ್ರೆಸ್ ಸಂಸದ ಕಿಶೋರಿ ಲಾಲ್ ಶರ್ಮಾ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದೇಣಿಗೆ ಕಳ್ಳತನವನ್ನು ತಡೆಯಲು ಸಾಧ್ಯವಾಗದ ಬಿಜೆಪಿ ಸರ್ಕಾರ ಈಗ ರಾಮ ಮಂದಿರದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುವುದನ್ನು ತಡೆಯುತ್ತಿದೆ ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳ್ಳರಿಗೆ ಮಾತ್ರ ಮಂದಿರ ಭೇಟಿ ಹಕ್ಕಿದೆಯೇ – ಕಾಂಗ್ರೆಸ್ ನಾಯಕ ಅಂಶು ಅವಸ್ಥಿ ಪ್ರಶ್ನೆ
ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಕ್ತಾರ ಅಂಶು ಅವಸ್ಥಿ, ನಮ್ಮನ್ನು ನಿಯಂತ್ರಿಸಲು ಬಿಜೆಪಿ ಸರ್ಕಾರ ಬಯಸುತ್ತಿದೆ. ಇದು ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ಸರ್ವಾಧಿಕಾರ. ಕಳ್ಳರು ಮತ್ತು ಡಕಾಯಿತರಿಗೆ ಮಾತ್ರ ರಾಮ ಮಂದಿರಕ್ಕೆ ಭೇಟಿ ನೀಡುವ ಹಕ್ಕಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣವು ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಕಳ್ಳತನದ ತನಿಖೆಗಾಗಿ ಯೋಗಿ ಆದಿತ್ಯನಾಥ್ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ದೇಣಿಗೆ ಎಣಿಕೆಗೆ ಕಾರಣರಾದ ಆರು ಮಂದಿ ಸೇರಿದಂತೆ ಎಂಟು ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ದುರ್ಬಳಕೆ ಕೇಸ್ – ಎಲ್ಲಾ 8 ಆರೋಪಿಗಳು ಜೈಲಿಗೆ
