ಲಕ್ನೋ: ಅಯೋಧ್ಯೆಯ(Ayodhya) ಶ್ರೀರಾಮ ಜನ್ಮಭೂಮಿ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಮತ್ತು ಕಾಣಿಕೆಗಳ ದುರ್ಬಳಕೆ (Ram Temple Donation Row) ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಬಂಧಿತರಾಗಿರುವ ಎಲ್ಲಾ ಎಂಟು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಹಿಂದೆ ನೀಡಲಾಗಿದ್ದ 3 ದಿನಗಳ ನ್ಯಾಯಾಂಗ ಬಂಧನದ(Judicial Custody) ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆಯ ವಿಶೇಷ ನ್ಯಾಯಾಧೀಶ ರಜತ್ ವರ್ಮಾ ಅವರ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯವು ಜುಲೈ ಮಧ್ಯಭಾಗದವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ರಾಮ ಮಂದಿರದ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ವಂಚಿಸಿರುವ ಆರೋಪದ ಮೇಲೆ ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ, ತಿನ್ನು ಯಾದವ್, ಮನೀಶ್ ಯಾದವ್ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರಾಮನ ದೇಣಿಗೆ ಕದ್ದವರ ಪರ ವಕಾಲತ್ತು ವಹಿಸಿದ್ರೆ 5 ಲಕ್ಷ ದಂಡ – ಬಾರ್ ಅಸೋಸಿಯೇಷನ್ ಖಡಕ್ ಎಚ್ಚರಿಕೆ
ತನಿಖೆಯ ವೇಳೆ ಪೊಲೀಸರು ಆರೋಪಿಗಳಿಂದ ಸುಮಾರು 79.85 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕೌಶಲ್ಪುರಿಯಲ್ಲಿರುವ ಮುಖ್ಯ ಸೂತ್ರಧಾರಿ ಅನುಕಲ್ಪ್ ಮಿಶ್ರಾ ನಿವಾಸದಿಂದಲೇ 20 ಲಕ್ಷ ರೂ. ಪತ್ತೆಯಾಗಿದೆ.
ವಿಶೇಷ ತನಿಖಾ ತಂಡ (SIT) ಮಂದಿರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, 39 ದಿನಗಳಲ್ಲಿ ಸುಮಾರು 70 ಬಾರಿ ದೇಣಿಗೆ ಹಣವನ್ನು ಕದ್ದು, ಮಂದಿರದ ಶೌಚಾಲಯಗಳಲ್ಲಿ ಅಡಗಿಸಿಟ್ಟು ನಂತರ ರಾತ್ರಿ ವೇಳೆ ಸಾಗಿಸುತ್ತಿದ್ದ ದೊಡ್ಡ ಜಾಲ ಪತ್ತೆಯಾಗಿದೆ.
