Connect with us

ರಾಹುಲ್ ಆಪ್ತ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

ರಾಹುಲ್ ಆಪ್ತ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

– ಬಿಜೆಪಿ ಒಂದೇ ರಾಷ್ಟ್ರೀಯ ಪಕ್ಷ
– ಕಾಂಗ್ರೆಸ್ಸಿನ ಬ್ರಾಹ್ಮಣ ನಾಯಕರೆಂದೇ ಬಿಂಬಿತವಾಗಿದ್ದ ಜಿತಿನ್ ಪ್ರಸಾದ

ನವದೆಹಲಿ: ರಾಹುಲ್ ಗಾಂಧಿ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ ಇಂದು ಬಿಜೆಪಿಯನ್ನು ಸೇರಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಬ್ರಾಹ್ಮಣ ಮುಖ ಎಂದೇ ಬಿಂಬಿತವಾಗಿದ್ದ ಜಿತಿನ್ ಪ್ರಸಾದ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯ ಪಕ್ಷದ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದು, ಕಾಂಗ್ರೆಸ್ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.

ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮೊದಲ ಅವಧಿಯಲ್ಲಿ ಜಿತಿನ್ ಪ್ರಸಾದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಯ ರಾಜ್ಯ ಸಚಿವರಾಗಿದ್ದರೆ ಎರಡನೇ ಅವಧಿಯಲ್ಲಿ ಉಕ್ಕು ಖಾತೆಯ ರಾಜ್ಯ ಸಚಿವರಾಗಿದ್ದರು.

ಬಿಜೆಪಿಗೆ ಸೇರಿ ಮಾತನಾಡಿದ ಜಿತಿನ್ ಪ್ರಸಾದ, “ಬಿಜೆಪಿ ಮಾತ್ರ ನಿಜವಾದ ರಾಜಕೀಯ ಪಕ್ಷ ಮತ್ತು ಏಕೈಕ ರಾಷ್ಟ್ರೀಯ ಪಕ್ಷ. ಉಳಿದ ಪಕ್ಷಗಳು ಪ್ರಾದೇಶಿಕ ಪಕ್ಷವಾಗಿದ್ದು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮಾತ್ರ ದೇಶವು ಈಗ ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ನೀಡಬಹುದು” ಎಂದು ಹೇಳಿದ್ದಾರೆ.

ನಾನು ರಾಜಕೀಯದಿಂದ ಸುತ್ತುವರೆದಿರುವ ಪಕ್ಷದಲ್ಲಿದ್ದೇನೆ ಎನ್ನುವುದು ನನಗೆ ತಿಳಿಯಿತು. ಇದರಿಂದಾಗಿ ಜನರಿಗಾಗಿ ಜನರಿಗಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಯಿತು ಎಂದು ಹೇಳಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕಳೆದ ವರ್ಷ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ಸಿನಿಂದ ಬಿಜೆಪಿ ಸೇರ್ಪಡೆಯಾದ ಎರಡನೇ ಪ್ರಮುಖ ನಾಯಕ ಜಿತಿನ್ ಪ್ರಸಾದ ಆಗಿದ್ದಾರೆ. ಸಿಂಧಿಯಾ ರಾಜೀನಾಮೆ ನೀಡಿದ ಬೆನ್ನಲ್ಲೇ ಜಿತಿನ್ ಪ್ರಸಾದ ಸಹ ಗುಡ್‍ಬೈ ಹೇಳಲಿದ್ದಾರೆ ಎಂದ ವದಂತಿ ಹರಡಿತ್ತು. ಇವರ ಜೊತೆ ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಕೂಡ ಹೊರಹೋಗುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಪ್ರಕಟಿವಾಗಿತ್ತು.

ಜಿತಿನ್ ಪ್ರಸಾದ ಅವರು 2019ರಲ್ಲೇ ಕಾಂಗ್ರೆಸ್ ತೊರೆಯಲು ಮುಂದಾಗಿದ್ದರು. ಆದರೆ ಆ ಸಂದರ್ಭದಲ್ಲಿ ಪ್ರಿಯಾಂಕ ವಾದ್ರಾ ಅವರು ಮನವೊಲಿಸಿದ್ದರಿಂದ ಅವರು ಪಕ್ಷದಲ್ಲೇ ಉಳಿದುಕೊಂಡರು ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ. ಇದನ್ನೂ ಓದಿ: ಪತ್ರಕ್ಕೆ ಸಹಿ ಹಾಕಿದ ನಾಯಕರಿಗಿಲ್ಲ ಸ್ಥಾನ, ಆಪ್ತರಿಗೆ ಮಣೆ – ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರಂಭ?

“ನೀವು ಪ್ರತಿನಿಧಿಸುವ ಜನರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಪಕ್ಷದಲ್ಲಿದ್ದು ಏನು ಪ್ರಯೋಜನ?” ಎಂದು ಜಿತಿನ್ ಪ್ರಸಾದ ಇಂದು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ಸಿನ ಗ್ರೂಪ್ 23 ಮಂದಿ ನಾಯಕರಲ್ಲಿ ಇವರು ಒಬ್ಬರಾಗಿದ್ದು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಪಕ್ಷದಲ್ಲಿ ಸುಧಾರಣೆಯಾಗಬೇಕು, ಆಂತರಿಕ ಸಭೆ ನಡೆಯಬೇಕು ಎಂದು ಕಳೆದ ವರ್ಷ ಆಗ್ರಹಿಸಿದ್ದರು.

ಪತ್ರ ಬರೆದ ನಾಯಕರ ವಿಚಾರ ಬಹಿರಂಗವಾದ ನಂತರ ಪ್ರಸಾದ ಅವರನ್ನು ಪಕ್ಷದ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದರು. ಈ ವರ್ಷ ನಡೆದ ಪಶ್ಚಿಮ ಬಂಗಾಳ ಚುನಾವಣೆಯ ಉಸ್ತುವಾರಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದನ್ನು ಟೀಕಿಸಿದ್ದರು.

ಕೋವಿಡ್ 19 ನಿರ್ವಹಣೆ ವಿಚಾರದಲ್ಲಿ ಯೋಗಿ ಅದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ನಿರ್ವಹಣೆಯ ಬಗ್ಗೆ ಟೀಕೆ ಇದೆ. ಈ ಸಂದರ್ಭದಲ್ಲಿ ಜಿತಿನ್ ಪ್ರಸಾದ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಶೇ.13ರಷ್ಟು ಬ್ರಾಹ್ಮಣ ಸಮುದಾಯದ ಮತದಾರರಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಬ್ರಾಹ್ಮಣರನ್ನು ಕಡೆಗಣಿಸಿದೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ ಆಗಿರುವುದು ಪಕ್ಷಕ್ಕೆ ಬಲ ತುಂಬಲಿದೆ. ಕಳೆದ ವರ್ಷ ಜುಲೈನಲ್ಲಿ ಪ್ರಸಾದ್ ಅವರು ಬ್ರಾಹ್ಮಣ ಸಮುದಾಯ ಪರವಾಗಿ ಧ್ವನಿಯಾಗಲು “ಬ್ರಾಹ್ಮಣ ಚೆಟ್ನಾ ಪರಿಷತ್” ಅನ್ನು ಪ್ರಾರಂಭಿಸಿದ್ದರು.

ಜಿತಿನ್ ಪ್ರಸಾದ್ ಅವರ ತಂದೆ ಕಾಂಗ್ರೆಸ್ ಹಿರಿಯ ಜಿತೇಂದ್ರ ಪ್ರಸಾದ ಅವರು 1999ರಲ್ಲಿ ಪಕ್ಷದ ನಾಯಕತ್ವ ವಹಿಸಿದ್ದ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದರು ಮತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಅವರ ವಿರುದ್ಧವೇ ಸ್ಪರ್ಧಿಸಿದ್ದರು. 2002 ರಲ್ಲಿ ಜಿತೇಂದ್ರ ಪ್ರಸಾದ ನಿಧನರಾಗಿದ್ದರು.

2015ರಲ್ಲಿ ಬಿಹಾರದ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ 2016ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆಗೆ ಸೋಲಾಗಿತ್ತು. ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕು. ಹೀಗಾಗಿ ಶೀಲಾ ದೀಕ್ಷಿತ್ ಅಥವಾ ಬೇರೆ ಬ್ರಾಹ್ಮಣ ನಾಯಕರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು.

Advertisement
Advertisement