ನವದೆಹಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಪಟ್ಟುಹಿಡಿದು ಸದ್ದು ಮಾಡಿದ್ದ ‘ಕಾಕ್ರೋಚ್ ಪಕ್ಷ’ದ (Cockroach Janata Party) ನಾಯಕರು ಐಷಾರಾಮಿ ಹೋಟೆಲೊಂದರಲ್ಲಿ ಪಾರ್ಟಿ ನಡೆಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಾರ್ಟಿಯ ಸಂಭ್ರಮಾಚರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಕ್ಷದ ಪ್ರಮುಖ ನಾಯಕ ಸೌರವ್ ದಾಸ್ ಸೇರಿದಂತೆ ಹಲವರು ಕುಣಿದು ಕುಪ್ಪಳಿಸಿರುವುದು ಬಿಜೆಪಿ (BJP) ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ‘ನೀಟ್ ಪರೀಕ್ಷೆ ರದ್ದತಿಗೆ ನೊಂದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಅವರಿಗೋಸ್ಕರ ನಾವು ಪ್ರತಿಭಟನೆ ನಡೆಸಿದೆವು ಎಂದು ಜಿರಳೆ ಪಕ್ಷ ಹೇಳುತ್ತದೆ. ಇಂಥ ಸಾವಿನ ಶೋಕದಲ್ಲೂ ಈ ಪಾರ್ಟಿ ಸರಿಯೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರ ವಿರುದ್ಧದ ಕೇಸ್ ಹಿಂಪಡೆದ ಬಿಹಾರ
ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ, ಹೈ-ಫೈ ಹೋಟೆಲ್‌ನಲ್ಲಿ ಈ ರೀತಿ ಸಂಭ್ರಮಾಚರಣೆ ಮಾಡಿರುವುದು ಕಾಕ್ರೋಚ್ ಪಕ್ಷದ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇನ್ನೂ ಸಂಸದೆ ಕಂಗನಾ ರಣಾವತ್ ಈ ನಾಯಕರ ನಡವಳಿಕೆ ಅತ್ಯಂತ ಅಸಹ್ಯಕರವಾಗಿದೆ ಎಂದು ಕಿಡಿಕಾರಿದ್ದಾರೆ.
ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ‘ಕಾಕ್ರೋಚ್ ಪಕ್ಷ’, ಇದು ಯಾವುದೇ ಮೋಜಿನ ಪಾರ್ಟಿ ಆಗಿರಲಿಲ್ಲ. ಬದಲಿಗೆ ಪ್ರತಿಭಟನೆಯಲ್ಲಿ ಹಗಲಿರುಳು ಶ್ರಮಿಸಿದ ಸುಮಾರು 150 ರಿಂದ 200 ಜನ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಾಗಿತ್ತು ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, “ನಾವು ಎಂದಿಗೂ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ, ಪ್ರತಿಭಟನಾಕಾರರ ಪರವಾಗಿ ನಮ್ಮ ಹೋರಾಟ ಮುಂದುವರಿದಿದೆ. ಇದು ಇಂದಿನ ಯುವಪೀಳಿಗೆಯ (Gen-Z) ಶೈಲಿ, ಇದನ್ನು ಅರ್ಥಮಾಡಿಕೊಳ್ಳದ ʻಅಂಕಲ್-ಆಂಟಿಗಳು ಬೇಕೆಂದರೆ ದೂರಬಹುದು’ ಎಂದು ಬಿಜೆಪಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ನೀಟ್ ಪ್ರತಿಭಟನೆಯಲ್ಲಿ 2,873 ಕ್ರಿಮಿನಲ್‌ಗಳು – ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದೆಹಲಿ ಪೊಲೀಸ್ ವರದಿ
