ಲಕ್ನೋ: ಮುಂಬರುವ 2027ರ ವಿಧಾನಸಭಾ ಚುನಾವಣೆ (Assembly Elections 2027) ಬೆನ್ನಲ್ಲೇ ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಆದಿತ್ಯನಾಥ್ (CM Yogi Adityanath) ಚುನಾವಣಾ ಪೂರ್ವ ಭರವಸೆ ಘೋಷಿಸಿದ್ದಾರೆ. 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವಾಗಿ ತಿಳಿಸಿದ್ದಾರೆ.
ವಾರಾಣಸಿಯಲ್ಲಿ ನಡೆದ ‘ವರ್ಕಿಂಗ್ ವುಮೆನ್ಸ್ ಹಾನರ್ ಸಮಾರಂಭ’ದಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾವಲಂಬಿಗಳಾಗಲು ಅಗತ್ಯವಾದ ಬಂಡವಾಳದ ಕೊರತೆ ಎದುರಾಗಬಾರದು. ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಹೀಗಾಗಿ ಉತ್ತರ ಪ್ರದೇಶ ಮಹಿಳಾ ಉದ್ಯಮಿ ಕ್ರೆಡಿಟ್ ಯೋಜನೆಯಡಿಯಲ್ಲಿ (Uttar Pradesh Mahila Udyami Credit Yojana) 1 ಕೋಟಿ ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಮೂರು ಕಂತುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಸಿಲುಕಿದ ಗೂಡ್ಸ್ ಟ್ರಕ್
ಮೊದಲ ಕಂತಿನಲ್ಲಿ 20,000 ರೂ. ನೀಡಲಾಗುವುದು. ಮೊದಲ ಕಂತಿನಲ್ಲಿ ಸಾಲ ಪಡೆದ ಮಹಿಳೆಯರು ಕಾಲಕಾಲಕ್ಕೆ ಮರುಪಾವತಿ ಮಾಡಿದರೆ, ಆ ಮಹಿಳೆಯರು ಎರಡೇ ಕಂತಿನಲ್ಲಿ 30,000 ರೂ. ಸಾಲ ಪಡೆಯಲು ಅರ್ಹರಾಗುತ್ತಾರೆ. ಅದರಂತೆ ಎರಡೇ ಕಂತಿನ ಹಣ ಮರುಪಾವತಿ ಬಳಿಕ ಮೂರನೇ ಕಂತಿನಲ್ಲಿ 50,000 ರೂ. ಸಾಲ ಪಡೆಯಬಹುದು.
ಮಹಿಳೆಯರು ಸಣ್ಣ ಉದ್ಯಮ ಆರಂಭಿಸಲು, ಈಗಾಗಲೇ ನಡೆಸುತ್ತಿರುವ ಉದ್ಯಮವನ್ನು ವಿಸ್ತರಿಸಲು ಹಾಗೂ ಆದಾಯ ಹೆಚ್ಚಿಸುವ ಚಟುವಟಿಕೆಗಳಿಗೆ ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಕೃಷಿ, ಪಶುಸಂಗೋಪನೆ, ಆಹಾರ ಸಂಸ್ಕರಣೆ, ಸಣ್ಣ ವ್ಯಾಪಾರ, ಕರಕುಶಲ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಅಗತ್ಯವಿರುವ ಆರಂಭಿಕ ಬಂಡವಾಳವನ್ನು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್?
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಸಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಹಿಳೆಯರಿಗೆ ಸುಲಭವಾಗಿ ಸಾಲ ಸೌಲಭ್ಯ ತಲುಪಿಸುವ ಕುರಿತು ಚರ್ಚಿಸಲಾಗಿದೆ.
ಗ್ರಾಮೀಣ ಮಹಿಳೆಯರ ಆದಾಯವನ್ನು ಹೆಚ್ಚಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿ ಈ ಯೋಜನೆಯನ್ನು ತರಲಾಗುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಉದ್ಯಮಶೀಲರನ್ನಾಗಿ ರೂಪಿಸುವುದರೊಂದಿಗೆ ‘ಲಖಪತಿ ದೀದಿ’ ಗುರಿಗೂ ಯೋಜನೆ ನೆರವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಇದನ್ನೂ ಓದಿ: ಕೇಂದ್ರದಿಂದ 2186 ಕೋಟಿ ರೂ. ಬಾಕಿ – ಕೋರ್ಟ್ ಮೊರೆ: ಈಶ್ವರ ಖಂಡ್ರೆ
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಪಕ್ಷಗಳು ಗಮನ ಹರಿಸುತ್ತಿರುವ ಹೊತ್ತಲ್ಲಿ ಈ ಹೊಸ ಸಾಲ ಯೋಜನೆ ತಂದಿರುವುದು ಗಮನಾರ್ಹ. ಈ ಹಿಂದೆ ಸರ್ಕಾರವು ಮಹಿಳೆಯರಿಗೆ 50,000 ರೂ. ಆರ್ಥಿಕ ಸಹಾಯವನ್ನು ನೀಡಲಿದೆ ಎಂಬ ಬಗ್ಗೆ ಕೆಲವು ಊಹಾಪೋಹಗಳು ಹಬ್ಬಿದ್ದವು.ಇದನ್ನೂ ಓದಿ: ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ನಾಚಿಕೆಯಾಗುತ್ತಿದೆ, ಉದ್ಘಾಟನೆಗೆ ನಾನು ಬರಲ್ಲ: ಗಡ್ಕರಿ ಗರಂ

