ಮೈಸೂರು: ಮೈಸೂರು ದಸರಾ ಮಹೋತ್ಸವ 2026ರಲ್ಲಿ (Mysuru Dasara 2026) ಪ್ರವಾಸಿಗರಿಗೆ ಅತ್ಯಂತ ಪ್ರಮುಖ ಆಕರ್ಷಣೀಯವಾದ ದಸರಾ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಅವರು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿದರು.
ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ ಆಯೋಜಿಸಲಾಗಿರುವ ದಸರಾ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಗಾಜಿನಮನೆಯಲ್ಲಿ ವಿವಿಧ ಬಗೆಯ ಹೂಗಳಿಂದ ನಿರ್ಮಿಸಿದ್ದ ವಿಧಾನಸೌಧ ಮಾದರಿಯನ್ನು ಸಚಿವರು ಹಾಗೂ ಅಧಿಕಾರಿಗಳೊಡನೆ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನವನ್ನು ಪ್ರಜಾಪ್ರಭುತ್ವ ಹಬ್ಬದ ವಿಷಯಾಧಾರಿತ ಮಾದರಿಯಲ್ಲಿ ಸಾವಿರಾರು ವಿವಿಧ ಬಗೆಯ ಹೂಗಳಿಂದ ಪ್ರದರ್ಶಿಸಿದ್ದಾರೆ. ನಮ್ಮ ಸರ್ಕಾರದ ಉದ್ದೇಶವೂ ಪ್ರಜಾಪ್ರಭುತ್ವ ಕಾಪಾಡುವ ಕೆಲಸ ಮಾಡುತ್ತಿದೆ ಅದರಂತೆ ಫಲಪುಷ್ಪ ಪ್ರದರ್ಶನ ಆಯೋಜಿಸಿರುವಿದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನಸೌಧ ಆಕರ್ಷಣೆ
ಈ ಬಾರಿ 2 ಲಕ್ಷ ಕೆಂಪು ಗುಲಾಬಿ 4 ಸಾವಿರ ಸೇವಂತಿಗೆ ಹಾಗೂ 25 ಸಾವಿರ ಗ್ರೀನ್ ಫೋಲಿಯಜ್‌ಗಳನ್ನು ಬಳಸಿ ವಿಧಾನ ಸೌಧ ಮಾದರಿಯ ಪುಷ್ಪ ಪರಿಕಲ್ಪನೆಯನ್ನು ಗಾಜಿನಮನೆಯಲ್ಲಿ ನಿರ್ಮಿಸಲಾಗಿದೆ ಹಾಗೂ ಗಾಜಿನಮನೆ ಹೊರಗಡೆ ಚಿಕ್ಕ ಗಡಿಯಾರ ಮಾದರಿಯ ಪುಷ್ಪ, ಮತದಾನ ಜಾಗೃತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪುಷ್ಪಕೃತಿ ಹೀಗೆ ಇನ್ನು ಹಲವಾರು ಪುಷ್ಪ ಪ್ರದರ್ಶನಗಳು ಪ್ರವಾಸಿಗರನ್ನು ಆಕರ್ಷಣೆ ಮಾಡಲಿದೆ. ಇದನ್ನೂ ಓದಿ: ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ಪ್ರಹ್ಲಾದ್ ಜೋಶಿ
ಈ ವೇಳೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಕೆ.ಹರೀಶ್ ಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ನರೇಂದ್ರ ಹಾಗೂ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲೂ `ವಂದೇ ಮಾತರಂ’ ಗೊಂದಲ – ಪೂರ್ಣ ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರ ಆಕ್ಷೇಪ!

