– ರಾಮಲಿಂಗಾರೆಡ್ಡಿ ರಾಜೀನಾಮೆ ಒಗೆದು ತಮಿಳುನಾಡಿಗೆ ಹೋಗಿದ್ದಾರೆ; ಫುಡ್ ಡಿಪಾರ್ಟ್ಮೆಂಟಲ್ಲಿ ಮುನಿಯಪ್ಪಗೆ ಫುಡ್ ಸಿಗುತ್ತಿಲ್ಲ ಅಂತ ಟಾಂಗ್
ಬೆಂಗಳೂರು: ಭಾರತ್ ಜೋಡೋ ಯುವ ಸಂಘಕ್ಕೆ ಸರ್ಕಾರದಿಂದ ಹಣ ಕೊಡಬಾರದು ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ್ ಜೋಡೋ ಯುವ ಸಂಘಕ್ಕೆ ಹಣ ಎಲ್ಲಿಂದ ಕೊಡ್ತೀರಾ? ಸರ್ಕಾರ ಈ ಸಂಘಕ್ಕೆ ಹಣ ಕೊಡಬಾರದು. ನಿಮ್ಮ ಪಕ್ಷದಿಂದ ಬೇಕಾದ್ರೆ ಹಣ ನೀಡಲಿ. ಸರ್ಕಾರದ ಬೊಕ್ಕಸದಿಂದ ಹಣ ಕೊಡಬಾರದು. ಸಮಾಜ ಕಲ್ಯಾಣ ಇಲಾಖೆಗೆ ಪೈಪೋಟಿ ಶುರುವಾಗಿದೆ. ಸಮಾಜ ಕಲ್ಯಾಣ ಇಲಾಖೆಯನ್ನ ಪರಿಶಿಷ್ಟ ಜಾತಿಯವರಿಗೆ ಕೊಡಬಾರದು. ಬೇರೆಯವರಿಗೆ ಕೊಡಿ. ಪರಿಶಿಷ್ಟ ಜಾತಿ ಅವರಿಗೆ ಕೊಟ್ಟರೆ ಅವರ ಸಮುದಾಯ ಪರ ಲಾಬಿ ಮಾಡ್ತಾರೆ. ಹೀಗಾಗಿ, ಬೇರೆ ಸಮುದಾಯದವರಿಗೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾನ್ ಸಿಎಂ ಆದ್ಮೇಲೆ ರಾಮಲಿಂಗಾರೆಡ್ಡಿಗೆ ಬೆಂಗ್ಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದ್ದಿದ್ದು ನಿಜ: ಡಿಕೆಶಿ
ಗೃಹಲಕ್ಷ್ಮೀ ಹಣ 5,000 ಕೋಟಿ ಇನ್ನೂ ಬಾಕಿ ಇದೆ. ಜನ ಇನ್ಮುಂದೆಯೂ ಸರ್ಕಾರದ ಘೋಷಣೆಗಳಿಗೆ ಸೊಪ್ಪು ಹಾಕಲ್ಲ. ಈ ಸರ್ಕಾರ ಪ್ರಥಮದಲ್ಲೇ ಮುಗ್ಗರಿಸಿ ಬಿಟ್ಟಿದೆ. ಸಿದ್ದರಾಮಯ್ಯ ಮೊದಲ ಬಾರಿಗೆ ಮಗನನ್ನು ದೆಹಲಿಗೆ ಕರೆದುಕೊಂಡು ಹೋಗಿ ರಾಹುಲ್ ಗಾಂಧಿಗೆ ಪರಿಚಯಿಸಿ ಮಂತ್ರಿ ಮಾಡಿದ್ದಾರೆ. ಇದು ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಸಿಕ್ಕಿದ ಹಾಗೆ, ಅನುಕಂಪದಲ್ಲಿ ಮಂತ್ರಿ ಮಾಡಿದ್ದಾರೆ. ಅನುಕಂಪದ ನಾಯಕತ್ವದ ಆಯ್ಕೆಯಾಗಿ ರಾಹುಲ್ ಗಾಂಧಿ ತಮ್ಮ ಅನನುಭವ ದೇಶದ ಮುಂದೆ ಪ್ರದರ್ಶಿಸಿದಂತೆ ಇದು ಕೂಡಾ ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಹೊಸ ಸರ್ಕಾರದ ಪ್ರಾರಂಭವಾಗಿದೆ. ಹೊಸದೇನು ಅಲ್ಲ. ಕೆಟ್ಟು ನಿಂತ ಬಸ್‌ಗೆ ಹೊಸ ಚಾಲಕನ ನೇಮಕವಾಗಿದೆ. ಹೊಸ ಚಾಲಕ ಬಂದ ತಕ್ಷಣ ಕೆಟ್ಟ ಬಸ್ ಸರಿ ಹೋಗಲ್ಲ. ಬಸ್ ಬದಲಾಯಿಸಬೇಕಿತ್ತು. ಆದರೆ, ಸಮಯ ಬಂದಿಲ್ಲ. ಇದರಿಂದ ಪ್ರಯೋಜನೆ ಆಗಲ್ಲ. ಗೃಹಪ್ರವೇಶದ 3ನೇ ದಿನವೇ ಛಾವಣಿ ಕುಸಿತ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟರು.
ಗೃಹದಲ್ಲಿ ಈಗ ವಾಸ ಮಾಡಲು ಸಾಧ್ಯವೋ ಇಲ್ಲವೋ ಎಂದು ಪರೀಕ್ಷೆಯಾಗಬೇಕಿದೆ. ರಾಮಲಿಂಗಾರೆಡ್ಡಿ ರಾಜೀನಾಮೆ ಒಗೆದು ತಮಿಳುನಾಡಿಗೆ ಹೋಗಿದ್ದಾರೆ. ಫುಡ್ ಡಿಪಾರ್ಟ್ಮೆಂಟ್‌ನಲ್ಲಿ ಫುಡ್ ಸಿಗುತ್ತಿಲ್ಲ ಅಂತಾ ಕೆ.ಹೆಚ್.ಮುನಿಯಪ್ಪ ಬೇಸರ ಆಗಿದ್ದಾರೆ. ವಿಟಮಿನ್ ಇರುವ ಫುಡ್ ಅವರಿಗೆ ಈಗ ಬೇಕಾಗಿದೆ. ಸಿಎಂ ಇಂಧನ ಇಲಾಖೆಯಲ್ಲಿ ಅಧಿಕಾರಿಗಳನ್ನು ಬದಲಿಸಲು ಕೈ ಹಾಕಿದ್ದು ಜಾರ್ಜ್ ಅವರನ್ನು ಕೆರಳಿಸಿದೆ. ಬಿ.ಕೆ. ಕಾಂಗ್ರೆಸ್, ಡಿ.ಕೆ. ಕಾಂಗ್ರೆಸ್ ಮತ್ತು ಎಂ.ಕೆ. ಕಾಂಗ್ರೆಸ್ ಎಂದು ಕಾಂಗ್ರೆಸ್ ವಿಭಜನೆಯಾಗಿದೆ. ಇವರಿಂದ ಜನರು ಏನೂ ನಿರೀಕ್ಷೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ಜನರ ಸಮಸ್ಯೆಯತ್ತ ಇನ್ನೂ ಗಮನ ಹರಿಸಿಲ್ಲ. ಹೆಣ್ಣುಮಕ್ಕಳು ಗೊಬ್ಬರಕ್ಕಾಗಿ ಕ್ಯೂನಲ್ಲಿ ಅಂಗಡಿ ಮುಂದೆ ನಿಂತಿದ್ದಾರೆ. ಅಧಿಕಾರ ಮಾತ್ರ ನಮಗೆ ಮುಖ್ಯ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಇದು ಉತ್ತರ ಕುಮಾರನ ಸರ್ಕಾರವೋ ಉತ್ತರಾಭಿಮುಖ ಸರ್ಕಾರವೋ? ಮೊನ್ನೆಯಿಂದ ಅಲ್ಲಿ ಹೋದರು, ಇಲ್ಲಿ ಹೋದರು, ದರ್ಶನ ಪಡೆದರು ಇದೇ ಆಗಿದೆ. ಪ್ರತಿ ದಿನ ಬರೀ ದೇವಸ್ಥಾನಗಳು. ಮೂಢನಂಬಿಕೆ ಕಾಯ್ದೆ ಜಾರಿಗೆ ತರುತ್ತೇನೆ ಎಂದ ಸಿದ್ದರಾಮಯ್ಯ ಈಗೇನು ಹೇಳುತ್ತಾರೆ? ವಿಧಾನಸೌಧವನ್ನು ಜ್ಯೋತಿಷ್ಯ, ವಾಸ್ತು ಹೇಳುವವರಿಗೆ ಬರೆದು ಕೊಟ್ಟಿದ್ದೀರಾ? ಕಸದಿಂದ ರಸ ತೆಗೆಯುವ ಕಾರಣಕ್ಕೆ ಬೆಂಗಳೂರಿನಲ್ಲಿ ಇಷ್ಟು ಗೊಂದಲ ಆಗಿದೆ. ಕಸದ ಕರಾಮತ್ತಿನಿಂದಾಗಿ ಜಿಬಿಎಗೆ ಇಷ್ಟು ಹೋರಾಟ ನಡೆಯುತ್ತಿದೆ. ಬೆಂಗಳೂರಿನ ಖಾತೆ ಕೊಡಬೇಕು ಅಂತಾ ರಾಮಲಿಂಗಾರೆಡ್ಡಿ ಕೇಳಿರುವುದು ಅವರ ಇಚ್ಛೆ. ಇಲ್ಲಿ ಆಹಾರ ಸರಿ ಇಲ್ಲ ಅಂತಾ ಹೋದರೆ ಜನರಿಗೆ ಯಾವ ಒಳ್ಳೆಯ ಆಹಾರ ಕೊಡುತ್ತೀರಿ ಮುನಿಯಪ್ಪನವರೇ ಎಂದು ಪ್ರಶ್ನಿಸಿದರು.
ರಾಜ್ಯಸಭೆ, ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಆಯ್ಕೆ ಇಂದು ಅಥವಾ ನಾಳೆ ಒಳಗೆ ಅಗುತ್ತದೆ. ಕಾಂಗ್ರೆಸ್ ಅವರಿಗೆ ಅರ್ಜೆಂಟ್ ಇತ್ತು ನಾಮಿನೇಷನ್ ಮಾಡಿ ದೆಹಲಿಗೆ ಹೋದ್ರು. ಸೋಮವಾರದವರೆಗೆ ಸಮಯ ಇದೆ. ನಾಳೆ ಒಳಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಘೋಷಣೆ ಆಗಲಿದೆ. ರಾಜ್ಯ ಕೋರ್ ಕಮಿಟಿಯಿಂದ ಅಭಿಪ್ರಾಯ ಕಳಿಸಿದ್ದೇವೆ. ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ – ಒಂದು ಸಾಲಿನ ಸಂದೇಶ ಕೊಟ್ಟ ರಾಹುಲ್ ಗಾಂಧಿ
ವಿಧಾನ ಪರಿಷತ್ ಚುನಾವಣೆಗೆ 5 ನೇ ಅಭ್ಯರ್ಥಿ ಹಾಕ್ತೀವಿ ಎಂಬ ಸಿಎಂ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿ, 7 ಸ್ಥಾನ ಇವೆ.ಕಾಂಗ್ರೆಸ್‌ಗೆ 4 ಮತ್ತು 2 ನಮಗೆ ಸಿಗಲಿದೆ. ಜೆಡಿಎಸ್‌ಗೆ 18 ಸ್ಥಾನ ಇದೆ. ಜೆಡಿಎಸ್ ಅಭ್ಯರ್ಥಿ ಹಾಕ್ತೀನಿ ಅಂದರೆ ಇವರು ಏನ್ ಮಾಡ್ತಾರೆ? ನೋಡೋಣ ಎನ್ ಆಗುತ್ತೆ ಅಂತ. ಅವರೇನು ಮಾಡೋಕೆ ಹಾಗೆ ಮಾತಾಡಿರಬಹುದು ಎಂದು ಲೇವಡಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯನ್ನು ಪರಿಶಿಷ್ಟ ಜಾತಿಯವರಿಗೆ ಕೊಡಬಾರದು, ಬೇರೆಯವರಿಗೆ ವಹಿಸಬೇಕು. ಭಾರತ್ ಜೋಡೋ ಸಂಘಕ್ಕೆ ಸರ್ಕಾರದ ಹಣ ಪೋಲು ಮಾಡಲು ಸಾಧ್ಯವಿಲ್ಲ. ಗ್ಯಾರಂಟಿ ಅನುಷ್ಠಾನ ಸಮಿತಿಯೇ ಕಾನೂನು ಬಾಹಿರ. ಅಶೋಕ್ ಆರು ಪತ್ರ ಬರೆದರೂ ಇನ್ನೂ ಮನೆ ಕೊಟ್ಟಿಲ್ಲ. ನನಗೆ ಯಾರೋ ಬಿಟ್ಟು ಹೋದ ರಿಪೇರಿಯಾಗಲು ಆರು ತಿಂಗಳು ಬೇಕಿರುವ ಮನೆ ಕೊಟ್ಟಿದ್ದೀರಿ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಿಗೆ ಕ್ಯಾಬಿನೆಟ್ ರ‍್ಯಾಂಕ್, ಮನೆ ಕೊಟ್ಟಿದ್ದೀರಿ. ಸರ್ಕಾರದ ಹಣವನ್ನು ಸಂಘಕ್ಕೆ ಕೊಡಬಾರದು. ನಿಮಗೆ ಇಷ್ಟ ಇದ್ದರೆ ಪಕ್ಷದ ಹಣ ಕೊಡಿ ಎಂದು ವಾಗ್ದಾಳಿ ನಡೆಸಿದರು.
