ಬೆಂಗಳೂರು: ಕಾವೇರಿ ನೀರು ಹಂಚಿಕೆ (Cauvery Water Dispute) ಹಾಗೂ ಮೇಕೆದಾಟು ಯೋಜನೆ (Mekedatu Project) ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ (Vijay) ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ. ಕಾವೇರಿ ನದಿ ಉಭಯ ರಾಜ್ಯಗಳ ಜನರನ್ನು ಬೆಸೆಯುವ ಕೊಂಡಿಯಾಗಬೇಕೇ ವಿನಃ ವಿಭಜಿಸುವ ಶಕ್ತಿಯಾಗಬಾರದು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ ಬೆನ್ನಲ್ಲೇ ಎರಡೂ ರಾಜ್ಯಗಳ ನಡುವೆ ರಾಜಕೀಯ ಮತ್ತು ಕಾನೂನು ಸಮರ ತೀವ್ರಗೊಂಡಿದೆ. ಈ ವಾತಾವರಣದ ನಡುವೆ ವಿಜಯೇಂದ್ರ ಅವರು ತಮಿಳುನಾಡು ಸಿಎಂಗೆ ರಾಜತಾಂತ್ರಿಕ ಹಾಗೂ ಸೌಹಾರ್ದಯುತ ಹಾದಿ ತುಳಿಯುವಂತೆ ಮನವಿ ಮಾಡಿದ್ದಾರೆ. ನೆರೆಹೊರೆಯ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಅವುಗಳನ್ನು ಮುಕ್ತ ಸಂವಾದದ ಮೂಲಕ ಬಗೆಹರಿಸಿಕೊಳ್ಳುವುದು ಮುಖ್ಯ ಎಂದು ವಿಜಯೇಂದ್ರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಗ್ಲಾಸ್ಗೋದಲ್ಲಿ ಭಾರತಕ್ಕೆ ಅವಮಾನ? – ಟಿಶ್ಯೂ ಮೇಲೆ ಮ್ಯಾಪ್ ತಪ್ಪಾಗಿ ಮುದ್ರಿಸಿದ್ದಕ್ಕೆ ರೆಸ್ಟೋರೆಂಟ್ ವಿರುದ್ದ ಕ್ರಿಡಾಪಟುಗಳು ಗರಂ
ಹಿಂದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಹಾಗೂ ತಮಿಳುನಾಡಿನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಎಂ. ಕರುಣಾನಿಧಿ ಅವರು ತೋರಿಸಿದ ಉದಾರವಾದ ವಿಧಾನದ ಮೂಲಕ ಪರಿಹರಿಸಲಾಯಿತು. ನೀವು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕಾವೇರಿ ನೀರಿನ ಸಮಸ್ಯೆಯನ್ನು ಚರ್ಚಿಸಲು ಶೀಘ್ರದಲ್ಲೇ ನಮ್ಮ ಬೆಂಗಳೂರಿಗೆ ಭೇಟಿ ನೀಡುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಈ ಚರ್ಚೆಗಳನ್ನು ಅದೇ ರೀತಿಯ ರಾಜತಾಂತ್ರಿಕ ಮನೋಭಾವದಿಂದ ಮತ್ತು ಮುಖ್ಯವಾಗಿ ಕರ್ನಾಟಕದ ರೈತರು ಮತ್ತು ನಾಗರಿಕರ ಬಗ್ಗೆ ಸಹಾನುಭೂತಿಯಿಂದ ಸಮೀಪಿಸಬೇಕೆಂದು ನಾನು ವಿನಮ್ರವಾಗಿ ಒತ್ತಾಯಿಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ; 13 ಮಂದಿ ಸಾವು
ಬೆಂಗಳೂರು ಮತ್ತು ಕಾವೇರಿ ಜಲಾನಯನ ಪ್ರದೇಶದ ಹಲವಾರು ಪಟ್ಟಣಗಳ ಕೋಟ್ಯಂತರ ಜನರಿಗೆ ಕಾವೇರಿ ನೀರು ಜೀವನಾಡಿಯಾಗಿದೆ. ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರು ಮತ್ತು ತಮಿಳರು ಇಬ್ಬರೂ ತಮ್ಮ ಕುಡಿಯುವ ನೀರಿನ ಅಗತ್ಯಗಳಿಗಾಗಿ ಇದನ್ನು ಅವಲಂಬಿಸಿದ್ದಾರೆ. ಅಸಮರ್ಪಕ ಮತ್ತು ಅನಿಯಮಿತ ಮಾನ್ಸೂನ್ ರೈತರು ಮತ್ತು ನಾಗರಿಕರ ಮೇಲೆ ಅಗಾಧ ಒತ್ತಡವನ್ನು ಬೀರಿರುವ ಸಮಯದಲ್ಲಿ, ಅವರ ಕಳವಳಗಳನ್ನು ಕಡೆಗಣಿಸಲಾಗುವುದಿಲ್ಲ. ಮೇಕೆದಾಟು ಯೋಜನೆಯನ್ನು ಸಹಕಾರದ ಮನೋಭಾವದಿಂದ ನೋಡಬೇಕೆಂದು ನಾನು ನಿಮ್ಮನ್ನು ಮನವಿ ಮಾಡುತ್ತೇನೆ. ಇದು ತಮಿಳುನಾಡಿನ ಕಾನೂನುಬದ್ಧ ನೀರಿನ ಅಗತ್ಯಗಳಿಗೆ ಧಕ್ಕೆಯಾಗದಂತೆ ಬೆಂಗಳೂರಿನ ಕುಡಿಯುವ ನೀರಿನ ಅವಶ್ಯಕತೆಗಳನ್ನು ಗಮನಾರ್ಹವಾಗಿ ಪೂರೈಸುತ್ತದೆ. ಯೋಜನೆಗೆ ನಿಮ್ಮ ಬೆಂಬಲವು ನಮ್ಮ ಎರಡು ರಾಜ್ಯಗಳ ನಡುವಿನ ಸಹಕಾರದ ಪ್ರಬಲ ಸಂಕೇತವಾಗಬಹುದು. ತಮಿಳುನಾಡಿನ ಹಿತಾಸಕ್ತಿಗಳನ್ನು ಗೌರವಿಸುತ್ತಾ ಕರ್ನಾಟಕದ ನಿಜವಾದ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ನಮ್ಮ ಎರಡು ರಾಜ್ಯಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುವ ಮುತ್ಸದ್ದಿತನದ ನಿಲುವನ್ನು ನೀವು ತೆಗೆದುಕೊಳ್ಳುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಕಾವೇರಿ ನಮ್ಮ ಜನರನ್ನು ವಿಭಜಿಸುವ ಬದಲು ಅವರನ್ನು ಒಗ್ಗೂಡಿಸಲಿ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ; 13 ಮಂದಿ ಸಾವು
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದೇನೆ. ರಾಜ್ಯದ ರೈತರ ಹಿತ ಕಾಪಾಡಬೇಕು ಅನ್ನೋ ಉದ್ದೇಶದಿಂದ ಪತ್ರ ಬರೆದಿದ್ದೇನೆ. ಕರ್ನಾಟಕ, ತಮಿಳುನಾಡು ಒಟ್ಟಿಗೆ ಅನ್ಯೋನ್ಯವಾಗಿ ಹೋಗಬೇಕಿದೆ. ಎರಡೂ ರಾಜ್ಯದ ಜನರಿಗೆ ಕುಡಿಯುವ ನೀರು ಮತ್ತು ಬೆಳೆಗೆ ನೀರಿನ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೂ ಸಹಕಾರ ನೀಡಬೇಕು. ಎರಡೂ ರಾಜ್ಯದ ನಡುವೆ ಸೌಹಾರ್ದತೆ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸಲಿಂಗ ಕಾಮದ ಆಮಿಷ; ಯುವಕರ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್
