– ಗೇ ಡೇಟಿಂಗ್ ಆ್ಯಪ್ ಹೆಸರಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಗಳು
ಬೆಂಗಳೂರು: ಗೇ ಡೇಟಿಂಗ್ ಆ್ಯಪ್‌ಗಳ (Gay Dating App) ಮೂಲಕ ಅಮಾಯಕರನ್ನು ಬಲೆಗೆ ಬೀಳಿಸಿ, ಬೆದರಿಸಿ ನಗನಾಣ್ಯ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ಗ್ರೈಂಡರ್ ಗೇ ಆ್ಯಪ್ ಮೂಲಕ ಯುವಕನನ್ನು ಪರಿಚಯಿಸಿಕೊಂಡು ಪುಸಲಾಯಿಸಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಲ್ಲುಬಾಳು ಸಮೀಪದ ವಾಸವಿ ಬಡಾವಣೆ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿ ನಗನಾಣ್ಯ ದೋಚಿದ್ದ ಆರೋಪಿಗಳನ್ನು ಜಿಗಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ – 160 ಗ್ರಾಂ ಗಾಂಜಾ ವಶ
ಆನೇಕಲ್ ಪಟ್ಟಣದ ನಿವಾಸಿಗಳಾಗಿದ್ದ ವಿಶಾಲ್, ಅಜಯ್, ಸಂಜಯ್ ಮತ್ತು ಸೂರ್ಯ ಬಂಧಿತ ಆರೋಪಿಗಳು. ಉಳಿದ ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದು, ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕು ಬನವಾಸಿ ನಿವಾಸಿಯಾದ ದೂರುದಾರ, ನನಗೆ ಮೊಬೈಲ್‌ನಲ್ಲಿ Grinder App ಅನ್ನು ಉಪಯೋಗಿಸುವ ಅಭ್ಯಾಸವಿತ್ತು. ಚಾಟಿಂಗ್ ವೇಳೆ ಒಬ್ಬ ವ್ಯಕ್ತಿ ನನಗೆ ಸಿಗೋಣವೆಂದು ಹೇಳಿ ಕಲ್ಲುಬಾಳು ಗ್ರಾಮದಲ್ಲಿರುವ ವಾಸವಿ ಲೇಔಟ್‌ಗೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋದಾಗ ಬೈಕ್‌ನಲ್ಲಿ ನನ್ನನ್ನು ನೀಲಗಿರಿ ತೋಪಿಗೆ ಕರೆದುಕೊಂಡು ಹೋದ. ಅಲ್ಲಿ ಆಗಲೇ ಮೂರು ಜನ ಅಪರಿಚಿತ ವ್ಯಕ್ತಿಗಳು ಇದ್ದರು. ನನ್ನನ್ನು ಸುತ್ತುವರಿದು ಬಿಯರ್ ಬಾಟಲಿ ತೋರಿಸಿ ಸಾಯಿಸುವುದಾಗಿ ಬೆದರಿಸಿದರು. ಮೊಬೈಲ್‌ನಲ್ಲಿದ್ದ 45,000 ಹಣವನ್ನು ಗೂಗಲ್ ಪೇ ಮೂಲಕ ವರ್ಗಾವಣೆ ಮಾಡಿಕೊಂಡು, ಕೈನಲ್ಲಿದ್ದ ಚಿನ್ನದ ಉಂಗುರವನ್ನು ಕಸಿದುಕೊಂಡು ಪರಾರಿಯಾದರು ಎಂದು ಜಿಗಣಿ ಪೊಲೀಸ್ ಠಾಣೆಯಲ್ಲಿ (Jigani Police Station) ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡು ಜಿಗಣಿ ಪೊಲೀಸರು ತನಿಖೆಗಿಳಿದಾಗ ಆರೋಪಿಗಳು ನಕಲಿ ಖಾತೆಗಳನ್ನು ಸೃಷ್ಟಿಸಿ ಗೇ ಆ್ಯಪ್‌ಗಳಲ್ಲಿ ಯುವಕರನ್ನು ಸಂಪರ್ಕಿಸುತ್ತಿದ್ದರು. ಕೆಲ ದಿನ ಸ್ನೇಹ ಬೆಳೆಸಿ ಅವರ ವಿಶ್ವಾಸಗಳಿಸಿದ ನಂತರ ಸಲಿಂಗ ಸಂಬಂಧದ ನೆಪದಲ್ಲಿ ಆನೇಕಲ್ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಭೇಟಿ ನೀಡಲು ಆಹ್ವಾನಿಸುತ್ತಿದ್ದರು. ಸ್ಥಳಕ್ಕೆ ಬಂದ ಬಳಿಕ ಯುವಕರನ್ನು ಬೆದರಿಸಿ, ಕೆಲ ಸಂದರ್ಭಗಳಲ್ಲಿ ಬೆತ್ತಲೆಗೊಳಿಸಿ ಅವರ ಬಳಿಯಿದ್ದ ನಗದು, ಫೋನ್, ಉಂಗುರ, ಸರ ಸೇರಿದಂತೆ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಹಾಗಾಗಿ, ಆರೋಪಿಗಳ ಚಲನವಲನ ಹಾಗೂ ತಾಂತ್ರಿಕ ಮಾಹಿತಿ ಪರಿಶೀಲಿಸಿ ಜಿಗಣಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನವೀನ್ ಕುಮಾರ್ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಹಗರಿಬೊಮ್ಮನಹಳ್ಳಿ| ಪೊಲೀಸ್ ಕಸ್ಟಡಿಯಲ್ಲಿ ಕಾರ್ಮಿಕ ಅನುಮಾನಾಸ್ಪದ ಸಾವು
