– ಹೊರಟ್ಟಿ ತಾವಾಗಿಯೇ ರಾಜೀನಾಮೆ ನೀಡಿದ್ದಾರೆ
– ಖಾಲಿ ಇರುವ 1 ಸ್ಥಾನ ಮಹಿಳೆಯರಿಗೆ ನೀಡಲಾಗುವುದು
ನವದೆಹಲಿ: ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ ಎಂದು ಪ್ರಶ್ನಿಸುವ ಮೂಲಕ ಬಿ ನಾಗೇಂದ್ರ(B Nagendra) ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆಗಳು, ನಾಯಕರ ಮೇಲಿನ ಪ್ರಕರಣಗಳು, ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಪ್ರಸಂಗ ಹಾಗೂ ಸಂಪುಟ ಪುನಾರಚನೆ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದರು
ದೇಶದಲ್ಲಿ ಯಾರ ಮೇಲೆ ಕೇಸ್‌ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ ಎಂದು ಪ್ರಶ್ನಿಸಿದರು.
ನಾಗೇಂದ್ರ ಅವರು ಕರ್ನಾಟಕದಿಂದ ಹೊರಗೆ ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನೇ ಇದ್ದರೂ ಅದನ್ನು ಪರಿಶೀಲಿಸುತ್ತೇವೆ. ವಿಪಕ್ಷಗಳಿಗೆ ಚರ್ಚಿಸಲು ವಿಷಯಗಳು ಬೇಕು, ಹಾಗಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ ಎಂದು ತಿರುಗೇಟು ನೀಡಿದರು.
ಪರಿಷತ್ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ವರಿಷ್ಠರು ತಿಳಿಸಿದ್ದಾರೆ. ಬಸವರಾಜ ಹೊರಟ್ಟಿ ಅವರೇ ಸ್ವತಃ ನನ್ನ ಬಳಿ ಬಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅವರು ಗೌರವಯುತವಾಗಿ ನೀಡಿದ ರಾಜೀನಾಮೆಯನ್ನು ಒಪ್ಪಿಕೊಳ್ಳಲಾಗಿತ್ತು. ಹೊರಟ್ಟಿ ಅವರೇ ಸ್ವತಃ ಟೈಪ್ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ, ಇಲ್ಲದಿದ್ದರೆ ನಾವು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೆವು ಎಂದರು. ಇದನ್ನೂ ಓದಿ: ಷರತ್ತು ಉಲ್ಲಂಘಿಸಿ ದೆಹಲಿ ಪ್ರವಾಸ – ಸಚಿವ ನಾಗೇಂದ್ರಗೆ ಸಂಕಷ್ಟ, ರದ್ದಾಗುತ್ತಾ ಜಾಮೀನು?
ಸಂಪುಟದಲ್ಲಿ ಪ್ರಸ್ತುತ ಒಂದೇ ಒಂದು ಸ್ಥಾನ ಖಾಲಿ ಇದ್ದು, ಆ ಸ್ಥಾನವನ್ನು ಮಹಿಳೆಗೆ ನೀಡಲಾಗುವುದು. ಇದಕ್ಕೆ ಯಾವುದೇ ಆತುರವಿಲ್ಲ. ತೆ ಹಂಚಿಕೆ ನಾಳೆಯೇ ಆಗಬೇಕು ಎಂದೇನೂ ಇಲ್ಲ. ಸಚಿವರು ಈಗಾಗಲೇ ವಿವಿಧ ಜಿಲ್ಲೆಗಳಿಗೆ ತೆರಳಿ ಬರ ಪರಿಸ್ಥಿತಿಯ ಪ್ರವಾಸ ಮಾಡಿ ವರದಿ ಸಲ್ಲಿಸಿದ್ದಾರೆ. ಅಗತ್ಯ ಬಿದ್ದರೆ ನಾನೊಬ್ಬನೇ ಪ್ರತಿಯೊಂದಕ್ಕೂ ಉತ್ತರ ನೀಡಲು ಸಮರ್ಥನಾಗಿದ್ದೇನೆ ಎಂದು ಹೇಳಿದರು.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಭೇಟಿ ಕುರಿತು ಪ್ರತಿಕ್ರಿಯಿಸಿ, ದೆಹಲಿಗೆ ಬಂದಾಗಲೆಲ್ಲಾ ಸುರ್ಜೇವಾಲಾ ಅವರನ್ನು ಭೇಟಿಯಾಗುವುದು ಸಹಜ. ನಾಳೆಯೂ ಭೇಟಿಯಾಗುತ್ತೇನೆ ಹಾಗೂ ಮುಂದಿನ ದಿನಗಳಲ್ಲೂ ಪಕ್ಷದ ಸಂಘಟನೆ ಮತ್ತು ಕಾರ್ಯತಂತ್ರಗಳ ಕುರಿತು ಚರ್ಚಿಸಲು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.



