ಪಾಟ್ನಾ: ಭರತ್ ಭೂಷಣ್ ತಿವಾರಿ (Bharat Tiwari) ಎನ್‌ಕೌಂಟರ್‌ಗೆ (Encounter) ಸಂಬಂಧಿಸಿದಂತೆ ಬಿಹಾರದ ಭೋಜ್‌ಪುರ ಜಿಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ಭರತ್ ತಾಯಿ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಶಹಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಗದೀಶ್‌ಪುರ ಎಸ್‌ಡಿಪಿಒ, ಎಸ್‌ಎಚ್‌ಒ ಮತ್ತು ಘಟನೆಗೆ ಸಂಬಂಧಿಸಿದ ಇತರ ಪೊಲೀಸ್ ಸಿಬ್ಬಂದಿಯನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಜೂ.17 ರಂದು ನಡೆದ ಎನ್‌ಕೌಂಟರ್‌ನಲ್ಲಿ ಶಹಪುರ್ ಪೊಲೀಸ್ ಠಾಣೆ ಪ್ರದೇಶದ ಬಿಲೌಟಿ ಗ್ರಾಮದ ನಿವಾಸಿ ಭರತ್ ಹತ್ಯೆಯಾಗಿದ್ದ. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಪೊಲೀಸರ ಬಲಪ್ರಯೋಗದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ರಾಜ್ಯ ಸರ್ಕಾರ ಜೂ.20 ರಂದು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ತಿವಾರಿ ಅವರ ಕುಟುಂಬ ಪಾಟ್ನಾದಲ್ಲಿ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ತಮ್ಮ ಹೋರಾಟಕ್ಕೆ ಬೆಂಬಲ ಕೋರಿದೆ. ಜೂ.24 ರಂದು ನಿಗದಿಯಾದ ಪಂಚಾಯತ್ ಸಭೆಯಲ್ಲಿ ಭಾಗವಹಿಸುವಂತೆ ಕುಟುಂಬವು ಕಿಶೋರ್ ಅವರಿಗೆ ಮನವಿ ಮಾಡಿದೆ. ನ್ಯಾಯಕ್ಕಾಗಿ ಅವರ ಹೋರಾಟದಲ್ಲಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಕಿಶೋರ್, ಭರತ್ ಕುಟುಂಬಕ್ಕೆ ಭರವಸೆ ನೀಡಿದ್ದಾರೆ.
ಎನ್‌ಕೌಂಟರ್ ಬಳಿಕ ಪೊಲೀಸರು ತಮ್ಮ ಆರಂಭಿಕ ಹೇಳಿಕೆಯಲ್ಲಿ ತಿವಾರಿ ಅವರನ್ನು “ಮಾನಸಿಕವಾಗಿ ಅಸ್ವಸ್ಥ” ಎಂದು ಕರೆದಿದ್ದರು. ಆದಾಗ್ಯೂ, ಅವರ ಕುಟುಂಬ ಸದಸ್ಯರು ಮತ್ತು ಇತರರು ಅವರನ್ನು ಸಾಮಾಜಿಕ ಕಾರ್ಯಕರ್ತ ಎಂದು ಬಣ್ಣಿಸಿದ್ದಾರೆ. ಭರತ್ ತಿವಾರಿ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಒಂದು ವೀಡಿಯೊದಲ್ಲಿ ಎನ್‌ಕೌಂಟರ್‌ಗೂ ಮೊದಲು ತಿವಾರಿ ತನ್ನ ಕೈಯಲ್ಲಿದ್ದ ಆಯುಧವನ್ನು ಎಸೆಯುತ್ತಿರುವುದು ದಾಖಲಾಗಿದೆ. ಈ ವಿಡಿಯೋ ಬಗೆಗಿನ ಸತ್ಯಾಸತ್ಯತೆ ಪರಿಶೀಲನೆ ಹಂತದಲ್ಲಿದೆ. ಇನ್ನೂ, ತಿವಾರಿ ಪೊಲೀಸ್ ಸಿಬ್ಬಂದಿಯ ಮೇಲೆ ಪದೇ ಪದೇ ಗುಂಡು ಹಾರಿಸಿದ್ದು, ಇದರಿಂದ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದರು.
