Connect with us

Bengaluru City

ಎಲ್ಲರಿಗೂ ಉಚಿತ ವ್ಯಾಕ್ಸಿನ್ ಕೊಡಬೇಕು, ಮೂರನೇ ಅಲೆಗೂ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕು: ರಾಮಲಿಂಗಾ ರೆಡ್ಡಿ

Published

on

Share this

ಬೆಂಗಳೂರು: ದೇಶದ ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುವ ಸರ್ಕಾರ ಉಳಿದ ಶೇ.25ರಷ್ಟು ಜನಕ್ಕೆ ಯಾಕೆ ಖಾಸಗಿಯವರ ಮೂಲಕ ನೀಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರವೇ ಉಚಿತ ಲಸಿಕೆಯನ್ನು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುವ ಸರ್ಕಾರ ಉಳಿದ ಶೇ.25ರಷ್ಟು ಜನರಿಗೆ ಯಾಕೆ ಉಚಿತ ಲಸಿಕೆ ನೀಡಲು ಸಾಧ್ಯವಿಲ್ಲ? ಈ ಶೇ.25ರಷ್ಟು ಜನರನ್ನು ಹೇಗೆ ವರ್ಗೀಕರಣ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ಲಸಿಕೆ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಕೋವಿಡ್ ಮೊದಲ ಅಲೆ ಬಂದಾಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು. ಲಸಿಕೆ ತಯಾರಿಕೆ ವಿಚಾರವಾಗಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕಿತ್ತು. ಲಸಿಕೆ ಉತ್ಪಾದಿಸಲು ಇತರ ಕಂಪನಿಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಎರಡನೇ ಅಲೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ಇದ್ದರೂ ಸರ್ಕಾರ ಎಚ್ಛೆತ್ತುಕೊಳ್ಳಲಿಲ್ಲ. ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಸಮಯದಲ್ಲೂ ಬಿಜೆಪಿ ಸರ್ಕಾರ ಉಚಿತ ಲಸಿಕೆ ಘೋಷಿಸಿತ್ತು. ಆದರೆ ನಂತರ ಮುಂಚೂಣಿ ವಾರಿಯರ್ಸ್, ಆನಂತರ ಹಿರಿಯರಿಗೆ, ತದನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದು ಘೋಷಿಸಿದ್ದರು. ವಿರೋಧ ಪಕ್ಷಗಳು, ಮಾಧ್ಯಮಗಳಿಂದ ವ್ಯಾಪಕ ಟೀಕೆ ಆರಂಭವಾದ ನಂತರ, ಲಸಿಕೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸದೇ ಪ್ರಧಾನಿಗಳು ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಘೋಷಿಸಿದರು ಎಂದು ತಿಳಿಸಿದರು.

ಜವಾಬ್ದಾರಿ ಸ್ಥಾನದಲ್ಲಿ ಕೂತಿರುವ ಪ್ರಧಾನಿಗಳು ಲಸಿಕೆ ಲಭ್ಯತೆ ಬಗ್ಗೆ ಚಿಂತಿಸದೇ ಸಾಂಕೇತಿಕವಾಗಿ ಲಸಿಕೆ ಅಭಿಯಾನ ಆರಂಭಿಸಿದರು. ನಂತರ ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರಕ್ಕೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ವಿವಿಧ ದರ ನಿಗದಿ ಮಾಡಿದರು. ಕೋವ್ಯಾಕ್ಸಿನ್ ಬೆಲೆ ಒಂದು ಡೋಸ್ ಗೆ 900ರಿಂದ 1200 ರೂ.ವರೆಗೂ ನಿಗದಿ ಮಾಡಲಾಯಿತು. ಆ ಮೂಲಕ ಒಬ್ಬ ವ್ಯಕ್ತಿ ಲಸಿಕೆ ಪಡೆಯಲು 1800ರಿಂದ 2400 ರೂ. ವರೆಗೂ ವೆಚ್ಚ ಭರಿಸಬೇಕಾಯಿತು. ಒಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗದಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಲಸಿಕೆ ಪೂರೈಕೆಯಾಗುತ್ತಿತ್ತು. ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡಿತ್ತು. ಈ ಬಗ್ಗೆ ಟೀಕೆಗಳು ವ್ಯಕ್ತವಾಯಿತು. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಮಿತಿಯು ಆರೋಗ್ಯ ಮಂತ್ರಿಗಳಿಗೆ ನಿದ್ದೆಯಿಂದ ಎದ್ದೇಳಿ ಎಂದು ಪತ್ರ ಬರೆಯಲಾಯಿತು. ಇದೆಲ್ಲದರ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಲಸಿಕೆಗಾಗಿ ಮೀಸಲಿಟ್ಟ 35 ಸಾವಿರ ಕೋಟಿ ಹಣದ ಲೆಕ್ಕ ಕೇಳಿದ ನಂತರ ಮೂರು ತಿಂಗಳ ಕಾಲ ಮೆನೆಯಿಂದಾಚೆಗೆ ಬಾರದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಗಳು 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಎಂದು ಘೋಷಿಸಿದರು ಎಂದರು. ಇದನ್ನೂ ಓದಿ: ಕೊವಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ – 3ನೇ ಕ್ಲಿನಿಕಲ್ ಟ್ರಯಲ್ ವರದಿ ಸಲ್ಲಿಕೆ

ಕೇಂದ್ರ ಸರ್ಕಾರ ತನ್ನ ನೂತನ ಲಸಿಕೆ ನೀತಿಯಲ್ಲಿ 18-44 ವಯೋಮಾನದವರಲ್ಲಿ ಶೇ.75ರಷ್ಟು ಲಸಿಕೆ ಉಚಿತವಾಗಿ ನೀಡುತ್ತೇವೆ. ಉಳಿದ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳ ಮೂಲಕ ನೀಡುತ್ತೇವೆ ಎಂದು ಹೇಳಿದೆ. ದೇಶದ ಜನಸಂಖ್ಯೆ 138 ಕೋಟಿ ಜನ. ಕೇಂದ್ರ ಸರ್ಕಾರ ಹೇಳುವ ಶೇ.25ರಷ್ಟು ಜನ ಎಂದರೆ ಸುಮಾರು 34.5 ಕೋಟಿಯಷ್ಟು ಜನರು ಬರುತ್ತಾರೆ. ಅದರಲ್ಲಿ ಶೇ.61ರಷ್ಟು ಜನ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಂದರೆ ಸುಮಾರು 20 ಕೋಟಿ ಜನ 18 ವರ್ಷ ಮೇಲ್ಪಟ್ಟವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬೇಕಾಗಿದೆ. ಒಬ್ಬ ವ್ಯಕ್ತಿಗೆ ಪ್ರತಿ ಡೋಸ್ ಗೆ 300 ರೂ.ನಂತೆ ಎರಡು ಡೋಸ್ ಗೆ 600 ರೂ ಖರ್ಚು ಮಾಡಿದರೆ ಸುಮಾರು 54 ಸಾವಿರ ರೂ.ನಷ್ಟು ಕೋಟಿಯಷ್ಟು ವೆಚ್ಚ ತಗುಲುತ್ತದೆ. ಕೇಂದ್ರ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ಬಜೆಟ್ ನಲ್ಲಿ ಮೀಸಲಿಟ್ಟದ್ದು, ಇನ್ನು 19 ಸಾವಿರ ಕೋಟಿಯನ್ನು ಕೊಟ್ಟರೆ ಈ ಶೇ.25ರಷ್ಟು ಜನರಿಗೂ ಉಚಿತವಾಗಿ ಸರ್ಕಾರವೇ ಲಸಿಕೆ ನೀಡಬಹುದಾಗಿದೆ. ಆಗ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಿದಂತಾಗುತ್ತದೆ ಎಂದು ವಿವರಿಸಿದರು.

ಇದೇ ಶೇ.25ರಷ್ಟು ಜನ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದರೆ ಒಬ್ಬರಿಗೆ ಕನಿಷ್ಠ ಸರಾಸರಿಯಲ್ಲಿ 2 ಸಾವಿರ ರೂ. ನಂತೆ ಎಷ್ಟು ಕೋಟಿ ಹಣ ಖರ್ಚಾಗುತ್ತದೆ ಎಂಬುದನ್ನು ಗಮನಿಸಬೇಕು. ಈ ಶೇ.25ರಷ್ಟು ಜನ ಯಾವ ಪಾಪ ಮಾಡಿದ್ದರು? ಅವರಿಗೆ ಸರ್ಕಾರ ಯಾಕೆ ಉಚಿತ ಲಸಿಕೆ ನೀಡಲು ನಿರಾಕರಿಸುತ್ತದೆ? ಇವರಿಗೆ ಸರ್ಕಾರ ಉಚಿತವಾಗಿ ಲಸಿಕೆ ನೀಡಿದರೆ 8- 9 ಸಾವಿರ ಕೋಟಿ ರೂ. ನಲ್ಲಿ ಮುಗಿಯುತ್ತದೆ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದರೆ ಜನರಿಗೆ 50 ಸಾವಿರ ಕೋಟಿಗಿಂತ ಹೆಚ್ಚು ಹೊರೆ ಬೀಳುತ್ತದೆ. ಇದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ. ಒಬ್ಬೊಬ್ಬರಿಗೆ ಒಂದಂದು ನ್ಯಾಯಾ ಯಾಕೆ ಎಂಬುದು ನಮ್ಮ ಪ್ರಶ್ನೆ. ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಪ್ರಧಾನಿಗಳನ್ನು ಒತ್ತಾಯಿಸುತ್ತದೆ ಎಂದರು.

ನಮ್ಮ ಕ್ಷೇತ್ರದಲ್ಲಿ ಇದುವರಿಗೂ 1.30 ಲಕ್ಷದಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ನಮ್ಮ ರಾಜ್ಯದ ಜನರಿಗೆ ಆಕ್ಸಿಜನ್, ಲಸಿಕೆ ಎಲ್ಲವೂ ನ್ಯಾಯಾಲಯದ ಸೂಚನೆ ಹಾಗೂ ಮಾಧ್ಯಮಗಳ ಟೀಕೆಯಿಂದ ಸಿಕ್ಕಿದೆ. ಆದರೆ ಸರ್ಕಾರ ಮಾತ್ರ ತಾವೇ ಈ ಸಾಧನೆ ಮಾಡಿರುವಂತೆ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಮೂರನೇ ಅಲೆ ರಾಜ್ಯದಲ್ಲಿ ಸುಮಾರು 1.50 ಲಕ್ಷ ಮಕ್ಕಳಿಗೆ ಸೋಂಕು ತಗುಲಲಿದೆ ಎಂದು ನಾರಾಯಣ ಹೃದಯಾಲಯದ ತಜ್ಞ ವೈದ್ಯರಾದ ದೇವಿ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಮೊದದಲ ಹಾಗೂ ಎರಡನೇ ಅಲೆಯಲ್ಲಿ ಎಡವಿದ್ದು, ಮೂರನೆ ಅಲೆಯನ್ನು ಎದುರಿಸಲು ಸಿದ್ಧವಾಗಬೇಕು. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಸುಳ್ಳು ಸಾವಿನ ಸಂಖ್ಯೆಗಳನ್ನು ನೀಡಿದೆ. ನಮ್ಮ ರಾಜ್ಯದಲ್ಲೂ 30 ಸಾವಿರ ಮಂದಿ ಸಾವಿನ ಲೆಕ್ಕ ತೋರಿಸುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಸರ್ಕಾರ ಮೂರನೇ ಅಲೆ ವಿಚಾರವಾಗಿ ಸರ್ವಪಕ್ಷ ಹಾಗೂ ತಜ್ಞರ ಸಭೆ ಕರೆದು ಎಲ್ಲರ ಸಲಹೆಗಳನ್ನು ಪರಿಗಣಿಸಬೇಕು ಎಂದು ಸಲಹೆ ನೀಡಿದರು.

ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದ ಚರ್ಚೆಗೆ ಸಂಬಂಧಿಸಿದಂತೆ ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಎಲ್ಲರಿಗೂ ಸೂಚನೆಯನ್ನು ನೀಡಿದ್ದು, ಪ್ರತಿಯೊಬ್ಬರೂ ಅವರ ನಿರ್ದೇಶನವನ್ನು ಪಾಲಿಸಬೇಕು ಎಂದಷ್ಟೇ ಹೇಳುತ್ತೇನೆ. ಅದನ್ನು ಹೊರತಾಗಿ ಬೇರೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Click to comment

Leave a Reply

Your email address will not be published. Required fields are marked *

Advertisement