Connect with us

Districts

ಸಿಎಂ ಬಿಎಸ್‍ವೈ ಹೀರೋ, ಸಿದ್ದರಾಮಯ್ಯ ವಿಲನ್, ಎಚ್‍ಡಿಕೆ ಸೈಡ್ ಆ್ಯಕ್ಟರ್- ನಳಿನ್ ಕುಮಾರ್ ಕಟೀಲ್

Published

on

ಕಾರವಾರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೀರೋ, ಸಿದ್ದರಾಮಯ್ಯ ವಿಲನ್ ಹಾಗೂ ಎಚ್.ಡಿ ಕುಮಾರಸ್ವಾಮಿ ಸೈಡ್ ಆ್ಯಕ್ಟರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದಿನ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳನ್ನು ವಿಲನ್ ಹಾಗೂ ಸೈಡ್ ಆ್ಯಕ್ಟರ್ ಎಂದು ಹೇಳುವ ಮೂಲಕ ಚಾಟಿ ಬೀಸಿದರು.

ಕಳೆದ 5 ವರ್ಷದಲ್ಲಿ ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳಾಗಿದ್ದಾರೆ. 2013 ರಿಂದ 2018ರ ವರೆಗೆ ಒಬ್ಬರು ವಿಲನ್ ಮುಖ್ಯಮಂತ್ರಿ ಇದ್ದರು. 24 ಮಂದಿ ಹಿಂದೂ ಕಾರ್ಯಕರ್ತರು ಸತ್ತಾಗ ಕಣ್ಣೀರು ಬಂದಿಲ್ಲ. ಸಿರಸಿಯ ಭಟ್ಕಳದಲ್ಲಿ ಪರಮೇಶ್ ಮೇಸ್ತಾ ಹತ್ಯೆಯಾದಾಗ ಕಣ್ಣೀರು ಬಂದಿರಲಿಲ್ಲ. ಅಂದು ಮುಖ್ಯಮಂತ್ರಿ ಬಂದರು ಎಂದು ಪರಮೇಶ್ ಶವವನ್ನು ಅಡಗಿಸಿಟ್ಟಿದ್ದರು. ಅಷ್ಟೇ ಅಲ್ಲದೆ ಈ ರಾಜ್ಯದಲ್ಲಿ ಮಠ-ಮಂದಿರ, ಸಮಾಜವನ್ನು ಒಡೆದರು. ಮತ ಬ್ಯಾಂಕಿಗೋಸ್ಕರ ಮುಸಲ್ಮಾನರಿಗೂ ಬೇಡದೇ ಇರುವಂತಹ ಟಿಪ್ಪು ಸುಲ್ತಾನನ ಜಯಂತಿಯ ಮುಖಾಂತರ ಸಮಾಜದಲ್ಲಿ ಆಕ್ರೋಶವನ್ನು ಸೃಷ್ಟಿ ಮಾಡಿದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಲನ್ ಮುಖ್ಯಮಂತ್ರಿ ಎಂದೆ ಅಂದರು.

ಒಂದೂವರೆ ವರ್ಷ ಇನ್ನೊಬ್ಬರು ಸೈಡ್ ಆ್ಯಕ್ಟರ್ ಮುಖ್ಯಮಂತ್ರಿ ಇದ್ದರು. ಅವರು ತಾಜ್ ಹೋಟೆಲ್ ಬಿಟ್ಟು ಹೊರಗಡೆ ಬರಲೇ ಇಲ್ಲ. ಅವರು ಫುಲ್ ಟೈಮ್ ಅಲ್ಲ, ಪಾರ್ಟ್ ಟೈಂ ಮುಖ್ಯಮಂತ್ರಿಯಾಗಿದ್ದರು. ತಾಜ್ ಹೋಟೇಲಿನಲ್ಲೇ ಇರುತ್ತಿದ್ದ ಅವರು ಪುರುಸೋತ್ತಾದರೆ ಹೊರಗೆ ಬರುತ್ತಿದ್ದರು. ಈ ವೇಳೆ ಸಭಿಕರು ಸಾಂದರ್ಭಿಕ ಶಿಶು ಎಂದರು. ಆಗ ನಳಿನ್ ಅವರು ಅದನ್ನು ನಾನು ಹೇಳಲ್ಲ ನೀವೇ ಹೇಳಿದ್ದೀರಿ ಎಂದು ನಕ್ಕರು.

ಅವರು ಒಂದೂವರೆ ವರ್ಷದಲ್ಲಿ ಬಹಳ ಕಷ್ಟದಲ್ಲಿ ಮುಖ್ಯಮಂತ್ರಿಯಾಗಿದ್ದರು. ಕೇವಲ ಸೈಡ್ ಆ್ಯಕ್ಟರ್ ಆಗಿದ್ದರು. ಅದರಲ್ಲಿ ಆ್ಯಕ್ಟರ್ ಗಳೆಲ್ಲ ಬೇರೆಯೇ ಇದ್ದರು ಎಂದು ಹೇಳಿ ದೇವೇಗೌಡ, ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ರೇವಣ್ಣ ಹೆಸರು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಅವರನ್ನು ನಾನು ಪಾರ್ಟ್ ಸಿಎಂ ಎಂದು ಹೇಳಿದೆ ಎಂದರು.

ಕರ್ನಾಟಕಕ್ಕೆ ಈ ವಿಲನ್, ಪಾರ್ಟ್ ಟೈಂಗಳೆಲ್ಲ ಬೇಡ, ನಿಜವಾದ ಹೀರೋ ಬೇಕು. ಆ ಹೀರೋ ಮುಖ್ಯಮಂತ್ರಿಯೇ ಈಗ ಬಂದಿದ್ದಾರೆ. ಬೆಂಬಲ ಇರುತ್ತಿದ್ದರೆ ಕಳೆದ ಬಾರಿಯೇ ಸರ್ಕಾರ ಮಾಡುತ್ತಿದ್ದೆವು. ಆದರೆ ಅನಿವಾರ್ಯವಾಗಿ ಸರ್ಕಾರ ಮಾಡಬೇಕೆಂಬ ಜವಾಬ್ದಾರಿ ಯಡಿಯೂರಪ್ಪ ಅವರ ಕೈಗೆ ಬಂದಾಗ ಅವರು ಆ ಜವಾಬ್ದಾರಿಯನ್ನು ನಿರ್ವಹಣೆ ಮಾಡಿದರು. 117 ಮಂದಿ ಅವರಿಗೆ ಬೆಂಗಾವಲಾಗಿ ನಿಂತರು. ಕಾಂಗ್ರೆಸ್ಸಿನ ಹೀನ ರಾಜಕಾರಣದಿಂದ ಬೇಸತ್ತು, ಅದರಿಂದ ಹೊರಬಂದರು. ಕರ್ನಾಟಕವನ್ನು ಉಳಿಸಿ ಎಂದು ಯಡಿಯೂರಪ್ಪ ಅವರಿಗೆ ಕೈ ಮುಗಿದರು. ಹೀಗಾಗಿ ಇಂದು ಅವರು ಸರ್ಕಾರ ರಚನೆ ಮಾಡಿದರು ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *