ಅಹಮದಾಬಾದ್: ಗುಜರಾತ್‌ನ ಪ್ರಮುಖ ಸ್ಥಳಗಳಾದ ಸೋಮನಾಥ ದೇವಸ್ಥಾನ (Somnath Temple) ಹಾಗೂ ಬಿಜೆಪಿ ಕಚೇರಿಗಳನ್ನು ಬಾಂಬ್ ಸ್ಫೋಟಿಸಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ ಇ-ಮೇಲ್ (Bomb Threat) ಪೊಲೀಸರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಸೋಮವಾರ ಬೆಳಗ್ಗೆ ಬೆದರಿಕೆ ಮಾಹಿತಿ ಲಭ್ಯವಾದ ಬಳಿಕ ಪೊಲೀಸ್, ಅಗ್ನಿಶಾಮಕ ದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.
ಅಹಮದಾಬಾದ್‌ನ ಖಾನ್‌ಪುರದಲ್ಲಿರುವ ಬಿಜೆಪಿ ಕಚೇರಿಗೆ ಬೆದರಿಕೆ ಇ-ಮೇಲ್ ಬಂದಿದ್ದು, ಇದೇ ಸಂದೇಶದಲ್ಲಿ ಸೋಮನಾಥ ದೇವಸ್ಥಾನ ಹಾಗೂ ಕೋಬಾ ಪ್ರದೇಶದಲ್ಲಿರುವ ಬಿಜೆಪಿ ಕಚೇರಿಯನ್ನೂ ಗುರಿಯಾಗಿಸುವುದಾಗಿ ಉಲ್ಲೇಖಿಸಲಾಗಿದೆ.
ಮಾಹಿತಿ ದೊರೆತ ತಕ್ಷಣ ಖಾನ್‌ಪುರ ಬಿಜೆಪಿ ಕಚೇರಿಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಅಗ್ನಿಶಾಮಕ ಸಿಬ್ಬಂದಿ ವ್ಯಾಪಕ ತಪಾಸಣೆ ನಡೆಸಿದರು. ಸೋಮನಾಥ ದೇವಸ್ಥಾನ ಮತ್ತು ಕೋಬಾ ಬಿಜೆಪಿ ಕಚೇರಿಯಲ್ಲೂ ಭದ್ರತಾ ತಪಾಸಣೆ ಕೈಗೊಳ್ಳಲಾಯಿತು.
ಬೆದರಿಕೆ ಇ-ಮೇಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಬಿಜೆಪಿ ಕಚೇರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ರಾ ಸಂಸ್ಥೆಯನ್ನೂ ಗುರಿಯಾಗಿಸುವುದಾಗಿ ಹೇಳಲಾಗಿದೆ. ವಿವಿಧ ಸ್ಥಳಗಳಲ್ಲಿ ಬಾಂಬ್‌ಗಳನ್ನು ಇರಿಸಿರುವುದಾಗಿ ಇ-ಮೇಲ್‌ನಲ್ಲಿ ಹೇಳಿಕೊಳ್ಳಲಾಗಿದೆ. ಇ-ಮೇಲ್‌ನಲ್ಲಿ ಆಕ್ಷೇಪಾರ್ಹ ಘೋಷಣೆಗಳನ್ನೂ ಬಳಸಲಾಗಿದೆ.
ಅಹಮದಾಬಾದ್ ಪೊಲೀಸ್ ಎಸಿಪಿ ಅದ್ವೈತ್ ಗಾಂಧಿ ನೀಡಿದ ಮಾಹಿತಿಯಂತೆ, ಬೆಳಗ್ಗೆ ಸುಮಾರು 9 ಗಂಟೆಗೆ ಗಾಂಧಿನಗರದ ರಾಜ್ಯ ಗುಪ್ತಚರ ದಳದಿಂದ ಖಾನ್‌ಪುರ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿತು. ಬಳಿಕ BDDS ತಂಡ ಕಚೇರಿಯ ಸಂಪೂರ್ಣ ಪರಿಶೀಲನೆ ನಡೆಸಿತು. ಇದನ್ನೂ ಓದಿ: ಅಯೋಗ್ಯ, ನಾಲಾಯಕ್, ಮುಠ್ಠಾಳ, ಬಾಯಿ ತೆವಲಿಗೆ ಮಾತು : ಪ್ರತಾಪ್ ವಿರುದ್ಧ ಪ್ರದೀಪ್ ಆಕ್ರೋಶ
ತಪಾಸಣೆಯಲ್ಲಿ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ. ಸದ್ಯ ಪರಿಸ್ಥಿತಿ ಸಹಜವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಇ-ಮೇಲ್‌ನ ಮೂಲ, ಅದನ್ನು ಕಳುಹಿಸಿದವರು ಯಾರು ಮತ್ತು ಬೆದರಿಕೆ ಎಷ್ಟು ವಾಸ್ತವಿಕ ಎಂಬುದರ ಕುರಿತು ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ತನಿಖೆ ಮುಂದುವರಿಸಿವೆ. ಇದನ್ನೂ ಓದಿ: ಕುತೂಹಲ ಮೂಡಿಸುವ ಗೌರಿ ಶಂಕರ್ ನಟನೆಯ ಕಾಮನ್ ಮ್ಯಾನ್ ಟ್ರೈಲರ್

