ಬೆಂಗಳೂರು: ಮೈಸೂರಿನ ಮಾಜಿ ಸಂಸದ ನಾಲಾಯಕ್, ಅಯೋಗ್ಯ, ಮುಠ್ಠಾಳ ಒಬ್ಬ ಇದ್ದಾನೆ. ಅವನು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ಹೊರಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ, ಇಸ್ಲಾಂ ಧರ್ಮದ ಮಸೀದಿ ಮುಂದೆ ನೀನು ಮೆರವಣಿಗೆ ಹೋಗು ರಾಜಾ ಎಂದು ಹೇಳಿ, ಅಲ್ಲೇ ನಿಂತುಕೊಂಡು ಬಾಯಿ ತೆವಲಿಗೆ ಮಾತನಾಡಿದ್ದಾನೆ ಎಂದು ಕಿಡಿಕಾರಿದರು.
ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ವಿರುದ್ಧ ಈ ರೀತಿಯಾಗಿ ಅಸಭ್ಯವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಶಾಸಕರು, ಸಾರ್ವಜನಿಕವಾಗಿ ಪ್ರಚೋದನಕಾರಿ ಹಾಗೂ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಪ್ರಚೋದನೆ ನೀಡಿದ ತರ್ಲೆ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳದೇ ನನ್ನ ಮೇಲೆ ಎಫ್‌ಐಆರ್: ಪ್ರತಾಪ್ ಸಿಂಹ
ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದ ನಿರ್ಮಾಣದಲ್ಲಿ ದಲಿತ ಸಮುದಾಯದ ಪಾತ್ರ ಮಹತ್ತರವಾದುದು. ದಲಿತ ಸಂಘರ್ಷ ಸಮಿತಿ ಅಥವಾ ಸಮುದಾಯದ ಸಂಕೇತಗಳ ಬಗ್ಗೆ ಮಾತನಾಡುವಾಗ ಸಂಯಮ ಇರಬೇಕು ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, ಧಾರ್ಮಿಕ ಮತ್ತು ಸಮುದಾಯ ಸಂಕೇತಗಳನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವುದನ್ನು ನಿಲ್ಲಿಸಬೇಕು. ದಲಿತರ ಭಾವನೆಗಳಿಗೆ ಧಕ್ಕೆ ತಂದಿರುವ ಮಾಜಿ ಸಂಸದರು ಸಮುದಾಯದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

