ಮೈಸೂರು: ನಿಜವಾದ ಪ್ರಚೋದನೆ ಕೊಟ್ಟಿದ್ದೇ ಇನ್ಸ್‌ಪೆಕ್ಟರ್ ಧನಂಜಯ್. ಆತನ ವಿರುದ್ಧ ಮೊದಲು ಕ್ರಮ ಕೈಗೊಂಡು ಎಫ್‌ಐಆರ್ ದಾಖಲಿಸಬೇಕಿತ್ತು. ಆದರೆ ಗೃಹ ಸಚಿವರ ರಾಜಕೀಯ ಒತ್ತಡಕ್ಕೆ ಮಣಿದು ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಆಕ್ರೋಶ ಹೊರಹಾಕಿದ್ದಾರೆ.
ತನ್ನ ಮೇಲೆ ದಾಖಲಾದ ಎಫ್‌ಐಆರ್‌ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್(Police) ಇಲಾಖೆಯ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಒಬ್ಬ ತರ್ಲೆ ಇನ್‌ಸ್ಪೆಕ್ಟರ್‌ನಿಂದಾಗಿ ಇದೆಲ್ಲವೂ ನಡೆದಿದೆ. ಮಸೀದಿ ಮುಂದೆ ಆ ಇನ್‌ಸ್ಪೆಕ್ಟರ್ ಆಡಿದ ಮಾತುಗಳನ್ನಷ್ಟೇ ನಾನು ಪ್ರಸ್ತಾಪಿಸಿದ್ದೇನೆ. ‘ಏನು ಹೇಳುತ್ತೆ ನೋಡ ಬಾ’ ಎಂದು ಕರೆದಿದ್ದೆ, ಅದನ್ನಷ್ಟೇ ನಾನು ಕೇಳಿದ್ದು ಎಂದು ಹೇಳಿದರು.
ಆತ ನೀಡಿದ ಚಿತಾವಣೆಗೆ ನಾವು ಕೇವಲ ಸ್ಪಂದಿಸಿದ್ದೇವೆ ಅಷ್ಟೇ. ನೈಜವಾಗಿ ಆತನನ್ನು ವರ್ಗಾವಣೆ ಮಾಡಿ, ಆತನ ವಿರುದ್ಧವೇ ಮೊದಲು ಎಫ್‌ಐಆರ್ ದಾಖಲಿಸಬೇಕಿತ್ತು. ಅದನ್ನು ಬಿಟ್ಟು ನನ್ನ ಮೇಲೆ ಕೇಸ್ ಜಡಿದಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯವರು ರಣಹದ್ದುಗಳಿದ್ದಂತೆ, ಕೋಮುಗಲಭೆ ಮಾಡೋಕೆ ಕಾಯ್ತಾ ಇರ್ತಾರೆ: ಯತೀಂದ್ರ ನಿಗಿನಿಗಿ
ಐಜಿಪಿ, ಎಸ್ಪಿ ಹಾಗೂ ಡಿವೈಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗೃಹ ಸಚಿವರ ರಾಜಕೀಯ ಒತ್ತಡಕ್ಕೆ ತಲೆಬಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಯಾವುದೇ ಕಮಿಷನ್ ಹೊಡೆದಿಲ್ಲ, ಮುಡಾದಲ್ಲಿ ಅಕ್ರಮವಾಗಿ ಸೈಟ್ ಪಡೆದುಕೊಂಡಿಲ್ಲ. ನನ್ನ ವಿರುದ್ಧ ದಾಖಲಾಗಿರುವ ಈ ಎಫ್‌ಐಆರ್ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯಾಲಯದಲ್ಲಿ ನನಗೆ ಖಂಡಿತ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ತಮ್ಮ ರಾಜಕೀಯ ಹಿನ್ನೆಲೆಯ ಕುರಿತು ಮಾತನಾಡಿದ ಅವರು, ನಾನು ಯಾರದ್ದೋ ಅಪ್ಪನ ಹೆಸರು ಹೇಳಿಕೊಂಡು ಇಲ್ಲಿಗೆ ಬಂದಿಲ್ಲ. ನನ್ನನ್ನು ಕೇವಲ ರಾಜಕಾರಣಿಯಂತೆ ನೋಡಬೇಡಿ. ರಾಜಕಾರಣಕ್ಕೂ ಮೊದಲು ನಾನೊಬ್ಬ ಪತ್ರಕರ್ತ. ಪತ್ರಕರ್ತರಿಗೆ ದೇಶದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ಕಾನೂನು ಹೋರಾಟದ ಮೂಲಕವೇ ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

