ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಮೂರು ಹಾಗೂ ಗುಜರಾತ್‌ನಲ್ಲಿ 4 ರಾಜ್ಯಸಭಾ ಸ್ಥಾನಗಳನ್ನ ಅವಿರೋಧವಾಗಿ ಬಿಜೆಪಿ ಗೆದ್ದುಕೊಂಡಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳಾದ ರಜ್ನೀಶ್ ಅಗ್ರವಾಲ್, ತರುಣ್ ಚುಘ್ ಮತ್ತು ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂವರೂ ಮಧ್ಯಪ್ರದೇಶ ವಿಧಾನಸಭಾ ಸಮುಚ್ಚಯದಲ್ಲಿ ಚುನಾವಣಾ ಅಧಿಕಾರಿಯಿಂದ ಆಯ್ಕೆ ಪ್ರಮಾಣಪತ್ರ ಪಡೆದಿದ್ದಾರೆ. ಜೂನ್ 18 ರಂದು ಮತದಾನ ನಡೆಯಬೇಕಿತ್ತು. ಆದರೆ ಪ್ರತಿಸ್ಪರ್ಧಿಗಳಿಲ್ಲ ಹಿನ್ನಲೆ ಅವಿರೋಧ ಆಯ್ಕೆ ಮಾಡಲಾಯಿತು.
ರಿಟರ್ನಿಂಗ್ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕರಿಸಿದ್ದಾರೆ. ತೆಲಂಗಾಣದಲ್ಲಿ ಲಭ್ಯವಿರುವ ಒಂದು ಪ್ರಕರಣದ ವಿವರಗಳನ್ನು ನಾಮಪತ್ರದಲ್ಲಿ ಬಹಿರಂಗಪಡಿಸದ ಕಾರಣ, ಅವರ ನಾಮಪತ್ರವನ್ನು ಅಮಾನ್ಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡೆಯನ್ನ ಖಂಡಿಸಿ ಕಾಂಗ್ರೆಸ್ (Congress) ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಖುದ್ದು ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಮೀನಾಕ್ಷಿ ಪರ ನಟರಾಜನ್ ವಾದಮಂಡಿಸಿದ ಅಭಿಷೇಕ್ ಮನುಸಿಂಘ್ವಿ ರಿಟರ್ನಿಂಗ್ ಅಧಿಕಾರಿ ತಪ್ಪಾಗಿ ನಾಮಪತ್ರ ತಿರಸ್ಕರಿಸಿದ್ದಾರೆ ಎಂದು ವಾದಿಸಿದರು. ಪ್ರಕರಣದ ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದೆ.
ಗುಜರಾತ್‌ನ ನಾಲ್ವರು ಅಭ್ಯರ್ಥಿಗಳಿಗೂ ಜಯ
ಗುಜರಾತ್‌ನಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಎಲ್ಲಾ ನಾಲ್ವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜು ಶುಕ್ಲಾ, ಮಾನ್ಸಿಂಗ್ ಪರ್ಮಾರ್, ಮುಖೇಶ್ ರಥ್ವಾ ಮತ್ತು ಜಿತೇಂದ್ರ ಕಂಜರಿಯಾ ಗೆದ್ದ ಅಭ್ಯರ್ಥಿಗಳು.

ಇದರೊಂದಿಗೆ, ಗುಜರಾತ್ ಈಗ ರಾಜ್ಯಸಭೆಯಲ್ಲಿ 11 ಸಂಸದರನ್ನ ಹೊಂದಿದೆ, ಎಲ್ಲರೂ ಬಿಜೆಪಿಯವರು. 2029 ರಲ್ಲಿ ಮುಂದಿನ ರಾಜ್ಯಸಭಾ ಚುನಾವಣೆಯವರೆಗೆ, ಗುಜರಾತ್‌ನಿಂದ ಯಾವುದೇ ಕಾಂಗ್ರೆಸ್ ಸಂಸದರು ಇರುವುದಿಲ್ಲ ಅನ್ನೋದು ಗಮನಾರ್ಹ.
ಇನ್ನೂ ರಾಜಸ್ಥಾನದಲ್ಲಿ, ಮೂವರು ರಾಜ್ಯಸಭಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿಯ ಸತೀಶ್ ಪುನಿಯಾ ಮತ್ತು ಅಲ್ಕಾ ಗುರ್ಜರ್ ಎರಡು ಸ್ಥಾನಗಳನ್ನ ಗೆದ್ದರೆ, ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ, ನೀರಜ್ ಡಾಂಗಿ ಕಾಂಗ್ರೆಸ್‌ನಿಂದ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಯಾಗಿದ್ದಾರೆ.
