– ಲಭ್ಯವಿರುವ ನೀರು 2 ತಿಂಗಳಿಗಷ್ಟೇ ಸಾಕಾಗುತ್ತೆ
ಮಂಡ್ಯ: ರಾಜ್ಯದಲ್ಲಿ ತಲೆದೂರಿರುವ ಭೀಕರ ಮಳೆ ಕೊರತೆ ಹಾಗೂ ನೀರಿನ ಅಭಾವದ ಹಿನ್ನೆಲೆಯಲ್ಲಿ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ನೇತೃತ್ವದ ಬಿಜೆಪಿ ನಾಯಕರ ತಂಡ ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ (KRS Dam) ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಇಂದು ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಗೆ ಭೇಟಿ ನೀಡಿ, ನೀರಿನ ಸಂಗ್ರಹ, ನಿರ್ವಹಣೆ ಹಾಗೂ ನೀರಾವರಿ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದೆ.
ಬಳಿಕ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳು, ಆತಂಕಗಳು ಹಾಗೂ ನೀರಿನ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದೆ. ರೈತರ ಮಾತುಗಳಲ್ಲಿ ವ್ಯಕ್ತವಾದ… pic.twitter.com/zWLC0IPE7h
— R. Ashoka (@RAshokaBJP) July 4, 2026
ಮಳೆ ಕೈಕೊಟ್ಟಿರುವ ಕಾರಣ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಸದ್ಯ 80 ಅಡಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಸದ್ಯದ ಸ್ಥಿತಿಗತಿ ಹಾಗೂ ನೀರಿನ ಲಭ್ಯತೆ ಕುರಿತು ವಿಪಕ್ಷ ನಾಯಕರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಇದೇ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಸೇರಿದಂತೆ ಹಲವರು ಇದ್ದರು. ಇದನ್ನೂ ಓದಿ: ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ – ಹಾರಂಗಿ ಜಲಾಶಯಕ್ಕೆ 1,470 ಕ್ಯೂಸೆಕ್ ಒಳಹರಿವು

ಎಕ್ರೆಗೆ 50 ಸಾವಿರ ಪರಿಹಾರಕ್ಕೆ ಆಗ್ರಹ
ಬಳಿಕ ಮಾತನಾಡಿದ ಆರ್.ಅಶೋಕ್, ರಾಜ್ಯದ ಎಲ್ಲಾ ಡ್ಯಾಂಗಳು ಖಾಲಿ ಖಾಲಿಯಾಗಿದ್ದು, ಕಳೆದ ಬಾರಿಗಿಂತ ಕಾಲು ಭಾಗದಷ್ಟು ನೀರೂ ಇಲ್ಲ. ಕೆಆರ್‌ಎಸ್‌ನಲ್ಲಿ ಕೇವಲ 6 ಟಿಎಂಸಿ ನೀರಿದ್ದು, ಕುಡಿಯುವ ನೀರೇ ತಿಂಗಳಿಗೆ 3 ಟಿಎಂಸಿ ಬೇಕು. ಈಗ ಇರುವ ನೀರು ಕೇವಲ 2 ತಿಂಗಳಿಗೆ ಮಾತ್ರ ಸಾಕಾಗುತ್ತದೆ. ಸಿಎಂ ಡಿ.ಕೆ.ಶಿವಕುಮಾರ್ ಅವರು ನೀರಿಲ್ಲ, ಬೆಳೆ ಬೆಳೆಯಬೇಡಿ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ರೈತರು ಕಡ್ಲೆಕಾಯಿ ತಿನ್ನಬೇಕಾ? ಬೆಳೆ ಬೆಳೆಯದ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಾಗಿದೆ. ಈ ಹಿಂದೆ ಸ್ಟಾಲಿನ್ ಇದ್ದರು, ಈಗ ಟಿವಿಕೆ ಕಾಂಗ್ರೆಸ್ ಪಾರ್ಟ್ನರ್ ಆಗಿದೆ. ಮಳೆ ಅಭಾವದ ಇಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರು ಹಾಗೂ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಆದರೆ ಸರ್ಕಾರಕ್ಕೆ ಕಸದ ಟೆಂಡರ್ ಹಾಗೂ ಟನಲ್ ರೋಡ್ ಟೆಂಡರ್ ಕರೆಯುವುದರಲ್ಲೇ ಆಸಕ್ತಿ ಹೆಚ್ಚಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಯಿದ್ದರೂ ಕೃಷಿ ಸಚಿವರಿಲ್ಲ, ಸಂಪುಟ ಇನ್ನೂ ಪೂರ್ಣಗೊಂಡಿಲ್ಲ. ದೆಹಲಿ ಹೈಕಮಾಂಡ್‌ಗೆ ದುಡ್ಡು ಕೊಟ್ಟು ಸಚಿವ ಸ್ಥಾನ ಪಡೆಯಲು ಕಾಯುತ್ತಿದ್ದಾರೆ. ಈ ಸರ್ಕಾರ ದೆಹಲಿಯವರ ಪಾಲಿಗೆ ಎಟಿಎಂ ಆಗಿದೆ ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಭಾರೀ ಮಳೆ – ಕೆರೆಯಂತಾದ ಕೋರ್ಟ್ ಆವರಣ
