ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಹಳ್ಳಿಗಳ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಡದಿ ಭಾಗದ ನೂರಾರು ರೈತರು ತಮ್ಮನ್ನು ಭೇಟಿ ಮಾಡಿ ಕೆಲವು ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದಾರೆ. ಭೂಮಿಗೆ ಹಣ ಪಡೆಯಲು ಸಿದ್ಧವಿದ್ದು, ಜಮೀನು ನೀಡಲು ಒಪ್ಪಿರುವುದಾಗಿ ರೈತರು ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಬೀಡಲು ಆದೇಶ – ಚರ್ಚೆ ಮಾಡಿ ತೀರ್ಮಾನ: ಸಿಎಂ
ಬಾಕಿ ಉಳಿದಿರುವ ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ. ಯಾರು ಜಮೀನು ನೀಡಲು ಸಿದ್ಧರಿರುತ್ತಾರೋ ಅವರ ಜಮೀನು ಪಡೆಯುತ್ತೇವೆ. ನೀಡಲು ಸಿದ್ಧರಿಲ್ಲದವರ ಜಮೀನನ್ನು ಪಡೆಯುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಇನ್ನು ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯಲ್ಲಿ 160 ರೈತರು ಮಾತ್ರ ಭಾಗವಹಿಸಿದ್ದರು. ಉಳಿದವರು ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರಿನಿಂದ ಬಂದಿದ್ದರು ಎಂದು ಹೇಳಿದರು. ಅವರು ಪ್ರತಿದಿನ ಹೋರಾಟ ಮಾಡಲಿ. ಎಷ್ಟು ಬೇಕಾದರೂ ಪಾದಯಾತ್ರೆ ಮಾಡಲಿ ಎಂದು ಪೊಲೀಸರಿಗೆ ಹೇಳಿದ್ದೇನೆ ಎಂದು ಡಿಕೆಶಿ ಹೇಳಿದರು. ಇದನ್ನೂ ಓದಿ: ಧಾರವಾಡ | ಶಾಲಾ ವಾಹನ ಹರಿದು ಎರಡು ವರ್ಷದ ಮಗು ಸಾವು
ಜಗದೀಶ್ ಶೆಟ್ಟರ್ ಅವರು ಇದ್ದಾಗ 1 ಸಾವಿರ ಎಕರೆ ಭೂಮಿಗೆ ಹಣ ನೀಡುವ ಪ್ರಕ್ರಿಯೆ ನಡೆದಿತ್ತು. ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡಲಿ. ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದರು.

