– ಸಿಜೆಪಿ `ಟೀಮ್ ಕೇಜ್ರಿವಾಲ್ʼ ಆಗಿ ಬದಲಾಗಿದೆ
– ನೂತನ ಬಣ ಸ್ಥಾಪಿಸಿದ ಮನೀಶ್ ಬ್ರಹ್ಮಭಟ್
ನವದೆಹಲಿ: ಜೆನ್-ಝೀಗಳ ಬಲದೊಂದಿಗೆ ಕೇವಲ 2 ತಿಂಗಳಲ್ಲಿ ಅಬ್ಬರ ಸೃಷ್ಟಿಸಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಎರಡು ಹೋಳಾಗಿದೆ. ಸಿಜೆಪಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮನೀಶ್ ಬ್ರಹ್ಮಭಟ್(Manish Brahmbhatt) ಅವರು ಮೂಲ ಸಂಘಟನೆಯಿಂದ ಹೊರಬಂದು ಕಾಕ್ರೋಚ್ ಜನತಾ ಪಾರ್ಟಿ-ಡೆಮಾಕ್ರಟಿಕ್ (CJP-D) ಎಂಬ ನೂತನ ಬಣ ರಚಿಸಿರುವುದಾಗಿ ಘೋಷಿಸಿದ್ದಾರೆ.
ಅಭಿಜೀತ್ ದೀಪ್ಕೆ ನೇತೃತ್ವದ ಮೂಲ ಸಿಜೆಪಿ ಸಂಘಟನೆಯು ಚಳವಳಿಯ ಯಶಸ್ಸಿನ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಇದು ಕೇವಲ ಟೀಮ್ ಕೇಜ್ರಿವಾಲ್(Team Kejriwal) ಆಗಿ ಬದಲಾಗಿದೆ ಎಂದು ಮನೀಶ್ ಬ್ರಹ್ಮಭಟ್ ಆರೋಪಿಸಿದ್ದಾರೆ.
ಸಿಜೆಪಿ-ಡೆಮಾಕ್ರಟಿಕ್ ಬಣದ ರಚನೆ ಕುರಿತು ಮಾತನಾಡಿದ ಮನೀಶ್ ಬ್ರಹ್ಮಭಟ್, ಜನರ ಬೆವರು-ರಕ್ತದಿಂದ ಕಟ್ಟಿ ಬೆಳೆಸಿದ ಈ ಆಂದೋಲನವು ಯಶಸ್ಸು ಕಂಡ ತಕ್ಷಣ ಮಾರಾಟವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದ್ದಾರೆ.
#WATCH | Delhi: Founder CJP- Democratic, Manish Brahmbhatt says, “Today, we are launching the ‘Cockroach Janata Party-Democratic.’ The reason for this launch is that the original ‘Cockroach Janata Party’ team—which emerged from a movement built on the blood and sweat of the… pic.twitter.com/tPoQYgOyjj
— ANI (@ANI) September 3, 2026
ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡ ಹಾಗೂ ಬೀದಿಗಿಳಿದು ಹೋರಾಡಿದ ಸ್ವಯಂಸೇವಕರನ್ನು ಸಮಾಲೋಚಿಸದೆ 12 ಸದಸ್ಯರ ರಾಷ್ಟ್ರೀಯ ತಂಡವನ್ನು ರಚಿಸಲಾಗಿದೆ. ಇದರಲ್ಲಿ 8 ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದವರಾಗಿದ್ದು, ಉಳಿದವರು ನಾಯಕರ ವೈಯಕ್ತಿಕ ಕಾಲೇಜು ಸ್ನೇಹಿತರು ಎಂದು ಬ್ರಹ್ಮಭಟ್ ಹೇಳಿದ್ದಾರೆ.
ಪ್ರತಿ ರಾಜ್ಯದಿಂದ ಐವರು ಹೋರಾಟಗಾರರನ್ನು ಒಳಗೊಂಡ ಪ್ರಜಾಸತ್ತಾತ್ಮಕ ಮಾದರಿಯನ್ನು ತಾವು ಪ್ರಸ್ತಾಪಿಸಿದ್ದರೂ ಅದನ್ನು ನಾಯಕತ್ವ ತಿರಸ್ಕರಿಸಿದೆ. ಅಲ್ಲದೆ ಮಹಿಳೆಯರು, ಮುಸ್ಲಿಮರು, ಲಂಗರ್ ಸೇವೆ ಒದಗಿಸಿದ ಸಿಖ್ಖರು ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಈ ಸಮಿತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ಅಣ್ಣಾ ಹಜಾರೆ ಚಳವಳಿಯ ಸಂದರ್ಭದಲ್ಲಿದ್ದಂತೆಯೇ ಈ ಸಂಘಟನೆಯ ಸಮಿತಿ ರಚನೆಯ ಹಿಂದೆಯೂ ಅರವಿಂದ್ ಕೇಜ್ರಿವಾಲ್ ಅವರ ಕುತಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ.
#WATCH | Delhi: Founder CJP- Democratic, Manish Brahmbhatt says, “Today, we are launching the ‘Cockroach Janata Party Democratic’… Why did we have to do this? The movement belonged to the nation; it succeeded because people poured their blood and sweat into it. However, after… pic.twitter.com/qt0OnWLrzM
— ANI (@ANI) September 3, 2026
ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ, ಲಾಠಿ ಪ್ರಹಾರ ಹಾಗೂ ಪ್ರತಿಭಟನೆಗಳ ಫಲವಾಗಿ ಈ ಹೋರಾಟ 2 ರಿಂದ 2.5 ಕೋಟಿ ಜನರನ್ನು ತಲುಪಿತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೊಂದ ಹಾಗೂ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದನ್ನು ಬಿಟ್ಟು, ನಾಯಕತ್ವವು ಜಾರ್ಖಂಡ್ ವಿದ್ಯಾರ್ಥಿ ಹೋರಾಟದಿಂದಲೂ ದೂರವುಳಿದು ಸ್ವತಃ ‘ಪೇಪರ್ ಮಾಫಿಯಾ’ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ನೂತನ ಬಣವಾದ ಸಿಜೆಪಿ-ಡಿ ಪಾರದರ್ಶಕತೆ ಮತ್ತು ಜವಾಬ್ದಾರಿಗೆ ಆದ್ಯತೆ ನೀಡಲಿದೆ ಎಂದು ಬ್ರಹ್ಮಭಟ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳು, ವಾಟ್ಸಪ್ ಮತ್ತು ಮಿಸ್ಡ್ ಕಾಲ್ ಸೌಲಭ್ಯಗಳ ಮೂಲಕ ಸಾರ್ವಜನಿಕರು ಹೊಸ ಬಣವನ್ನು ಸೇರಬಹುದಾಗಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜಿ ಇಲ್ಲದೆ ಧ್ವನಿ ಎತ್ತುವುದಾಗಿ ಅವರು ತಿಳಿಸಿದ್ದಾರೆ.
ನಾವಿ ವಿದ್ಯಾರ್ಥಿಗಳ ʼಎ ಟೀಮ್ʼ
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ಮಾತನಾಡಿದ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ನಮ್ಮನ್ನು ಕಾಂಗ್ರೆಸ್‌ನ ‘ಬಿ’ ಟೀಮ್ ಎಂದರೆ, ಕೆಲವರು ಆಮ್ ಆದ್ಮಿ ಪಕ್ಷದ ‘ಬಿ’ ಟೀಮ್ ಎನ್ನುತ್ತಿದ್ದಾರೆ. ಮೊದಲು ಅವರೆಲ್ಲ ಒಟ್ಟಿಗೆ ಕುಳಿತು ನಾವ್ಯಾರ ‘ಬಿ’ ಟೀಮ್ ಎಂದು ನಿರ್ಧರಿಸಲಿ. ಆದರೆ ನನ್ನ ಪ್ರಕಾರ, ನಾವೆಂದಿಗೂ ವಿದ್ಯಾರ್ಥಿಗಳ ‘ಎ ಟೀಮ್ʼ ಎಂದು ಹೇಳಿದ್ದಾರೆ.
