ರಾಯಚೂರು: ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ (Mantralaya) ರಾಯರ ಭಕ್ತರಿಗಾಗಿ 50 ಕೋಟಿ ವೆಚ್ಚದ ಕುಡಿಯುವ ನೀರು ಸಂಗ್ರಹಣಾ ಡ್ಯಾಂ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ.
ಬೇಸಿಗೆಯಲ್ಲಿ ಮಂತ್ರಾಲಯಕ್ಕೆ ಬರುವ ರಾಯರ ಭಕ್ತರು, ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಯೋಜನೆ ರೂಪಿಸಲಾಗಿದ್ದು, ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಕುಡಿಯುವ ನೀರಿಗಾಗಿ ಇಂಪೌಂಡಿಂಗ್ ಜಲಾಶಯ ನಿರ್ಮಾಣಕ್ಕೆ ರಾಯರ ಮಠ ಮುಂದಾಗಿದೆ. 2057 ರ ವರೆಗಿನ ಕುಡಿಯುವ ನೀರಿನ ಅಗತ್ಯ ಪೂರೈಸಲು ಜಲಾಶಯ ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಕಾವೇರಿ ವಿಚಾರವಾಗಿ ಭಾನುವಾರ ಸರ್ವಪಕ್ಷ ಸಭೆ: ಸಿಎಂ
ಮಂತ್ರಾಲಯಕ್ಕೆ ಬಂದು ಹೋಗುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ನೀರಿನ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗಿದೆ. ಶ್ರೀಮಠದ 40 ಎಕರೆ ಜಾಗದಲ್ಲಿ 50 ಕೋಟಿ ವೆಚ್ಚದಲ್ಲಿ ಮೊದಲನೇ ಫೇಸ್‌ನಲ್ಲಿ ಜಲಾಶಯ ನಿರ್ಮಾಣವಾಗಲಿದೆ. ಹೆಚ್‌ಎಎಲ್‌ನ ಸಿಎಸ್ಆರ್ ಚಟುವಟಿಕೆಗಳ ಅಡಿಯಲ್ಲಿ ಡ್ಯಾಂ ನಿರ್ಮಾಣವಾಗಲಿದ್ದು, 56.6 ಕೋಟಿ ಲೀಟರ್ ಸಾಮರ್ಥ್ಯದ ಇಂಪೌಂಡಿಂಗ್ ಜಲಾಶಯ 35 ಅಡಿ ಆಳ ಹೊಂದಿರಲಿದೆ. ಮಂತ್ರಾಲಯಕ್ಕೆ ಅಗತ್ಯವಿರುವ 20.67 ಎಂಸಿಎಫ್‌ಟಿ ಸಾಮರ್ಥ್ಯದ ಜಲಾಶಯ ನಿರ್ಮಾಣವನ್ನ 18 ತಿಂಗಳಲ್ಲಿ ಪೂರ್ಣಗೊಳಿಸಲು ರಾಯರ ಮಠ ಮುಂದಾಗಿದೆ.
