ಬೆಂಗಳೂರು: ಅದ್ದೂರಿಯಾಗಿ ಉದ್ಘಾಟನೆಗೊಂಡಿದ್ದ ಕೃಷ್ಣ ದಶಪಥ ರಸ್ತೆ(SM Krishna Corridor Road) ಕೇವಲ ನಾಲ್ಕೇ ತಿಂಗಳಲ್ಲಿ ಕಿತ್ತುಹೋಗಿದ್ದು, ಬೆಂಗಳೂರಿನಲ್ಲಿ(Bengaluru) ಕಳಪೆ ಕಾಮಗಾರಿಯ ಬಣ್ಣ ಮತ್ತೆ ಬಯಲಾಗಿದೆ.
ಸುಮಾರು 673 ಕೋಟಿ ರೂ. ವೆಚ್ಚದಲ್ಲಿ ಬಿಡಿಎ(BDA ನಿರ್ಮಿಸಿದ್ದ ಎಸ್.ಎಂ. ಕೃಷ್ಣ ದಶಪಥ ರಸ್ತೆಯಲ್ಲಿ (ನಾಡಪ್ರಭು ಕೆಂಪೇಗೌಡ ಬಡಾವಣೆ ಸಂಪರ್ಕ ರಸ್ತೆ) ಅಲ್ಲಲ್ಲಿ ಭಾರಿ ಗುಂಡಿಗಳು ಬಿದ್ದಿದ್ದು, ರಸ್ತೆ ತಗ್ಗು ಬಿದ್ದು ಡಾಂಬರು ಕಿತ್ತುಬಂದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಜೂನ್ 27ರಂದು ಡಿ.ಕೆ. ಶಿವಕುಮಾರ್(DK Shivakumar) ಅವರಿಂದ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದ್ದ 10 ಕಿ.ಮೀ ಉದ್ದದ ಈ ರಸ್ತೆ, ಮಾಗಡಿ ರಸ್ತೆಯ ಕಡಬಗೆರೆಯಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೋ ಡಿಪೋವರೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಉದ್ಘಾಟನೆಯಾದ ಕೇವಲ ನಾಲ್ಕು ತಿಂಗಳಲ್ಲೇ ಸುರಿದ ಮಳೆಗೆ ರಸ್ತೆಯ ಗುಣಮಟ್ಟ ಸಂಪೂರ್ಣ ಕುಸಿದಿದೆ.

ಸೂರೇಕೆರೆ ಸಮೀಪ ರಸ್ತೆಯ ಡಾಂಬರು ದೊಡ್ಡ ಪ್ರಮಾಣದಲ್ಲಿ ಕಿತ್ತುಹೋಗಿದ್ದು, ಒಳಗಿನ ಜಲ್ಲಿಕಲ್ಲುಗಳೆಲ್ಲ ಮೇಲೆದ್ದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಡಾಂಬರು ಹಾಕುವ ಮುನ್ನ ಮಣ್ಣು ಹಾಗೂ ವೆಟ್ ಮಿಕ್ಸ್ ಸರಿಯಾಗಿ ಹಾಕಿ ಗಟ್ಟಿಗೊಳಿಸದಿರುವುದೇ ರಸ್ತೆಯಲ್ಲಿ ತಗ್ಗು-ದಿಣ್ಣೆಗಳು ಉಂಟಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಕೆಳಗಿನ ಸುರಂಗ ರಸ್ತೆಯಲ್ಲಿ ನಿರಂತರವಾಗಿ ನೀರು ಸೋರಿಕೆಯಾಗುತ್ತಿದ್ದು, ಕಾಂಕ್ರೀಟ್ ಗೋಡೆಗಳ ಮೇಲೆ ಪಾಚಿ ಕಟ್ಟಿಕೊಂಡಿರುವುದಲ್ಲದೆ ಸುರಂಗದ ಒಳಗೂ ಬೃಹತ್ ಗುಂಡಿಗಳು ಸೃಷ್ಟಿಯಾಗಿವೆ.
ತನಿಖೆಗೆ ಆಗ್ರಹ:
ದಶಪಥ ರಸ್ತೆಯಾದ್ದರಿಂದ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತಿದ್ದು, ರಸ್ತೆಯ ಮಧ್ಯೆ ಹಠಾತ್ ಎದುರಾಗುವ ಗುಂಡಿಗಳು ಹಾಗೂ ತಗ್ಗುಗಳಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಬೀದಿ ದೀಪಗಳ ಸರಿಯಾದ ನಿರ್ವಹಣೆ ಇಲ್ಲದಿರುವುದು ಮತ್ತು ರಸ್ತೆ ಬದಿಯ ಕಸ ವಿಲೇವಾರಿಯಾಗದಿರುವುದು ರಾತ್ರಿ ವೇಳೆ ಸಂಚಾರವನ್ನು ಮತ್ತಷ್ಟು ಅಪಾಯಕಾರಿಯಾಗಿಸಿದೆ.
ಕೋಟಿಗಟ್ಟಲೆ ಸಾರ್ವಜನಿಕರ ತೆರಿಗೆ ಹಣ ವ್ಯಯಿಸಿ ನಿರ್ಮಿಸಿದ ರಸ್ತೆ ಕೇವಲ ನಾಲ್ಕು ತಿಂಗಳಲ್ಲಿ ಹಾಳಾಗಲು ಕಾರಣವೇನು ಎಂಬುದರ ಕುರಿತು ಸಮಗ್ರ ಕಳಪೆ ಕಾಮಗಾರಿ ತನಿಖೆ ನಡೆಸಬೇಕು ಮತ್ತು ಕೂಡಲೇ ಸುರಂಗದ ನೀರು ಸೋರಿಕೆ ತಡೆದು ಗುಣಮಟ್ಟದೊಂದಿಗೆ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
