ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ನಗರ ಪೊಲೀಸರು ಸಮರ ಸಾರಿದ್ದು, ಒಟ್ಟು 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, 8 ವಿದೇಶಿಯರು ಸೇರಿ 39 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಪೊಲೀಸರು (Bengaluru Police) ಮಿಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನದಡಿ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 55.8 ಕೋಟಿ ರೂ. ಮೌಲ್ಯದ 200 ಕೆ.ಜಿಗೂ ಅಧಿಕ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಆಶ್ರಮ ಶಾಲೆಯಲ್ಲಿ 6 ವಿದ್ಯಾರ್ಥಿನಿಯರಿಗೆ ಹಾವು ಕಡಿತ – ಮೂವರ ಸಾವು; ಓರ್ವಳಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ
ಸಿಸಿಬಿ (CCB) ಸೇರಿದಂತೆ ನಗರದ 16 ಪೊಲೀಸ್ ಯೂನಿಟ್‌ಗಳು ಕಳೆದೆರಡು ವಾರಗಳಿಂದ ಸರಣಿ ದಾಳಿ ಮುಂದುವರೆಸಿದ್ದವು. ಈ ವೇಳೆ ಅಮೃತಹಳ್ಳಿ, ಗಿರಿನಗರ, ಯಶವಂತಪುರ, ಯಲಹಂಕ, ಕೆಐಎ, ಹೆಬ್ಬಾಳ, ನಂದಿನಿ ಲೇಔಟ್, ಕಾಡುಗೋಡಿ, ಮಲ್ಲೇಶ್ವರಂ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮಿ ಲೇಔಟ್, ಬೇಗೂರು ಹಾಗೂ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ದಾಳಿಗಳು ನಡೆಸಿ, ಪೆಡ್ಲರ್‌ಗಳಿಂದ ಭಾರೀ ಪ್ರಮಾಣದ ವಿವಿಧ ಮಾದಕ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಇಡೀ ಕಾರ್ಯಾಚರಣೆಯಲ್ಲಿ ದೊಡ್ಡ ಹೈಲೈಟ್ ಅಂದರೆ ಅಮೃತಹಳ್ಳಿ ಪೊಲೀಸರ ಭರ್ಜರಿ ಬೇಟೆ. ಅಮೃತಹಳ್ಳಿ ಪೊಲೀಸರು ಬರೋಬ್ಬರಿ 28.8 ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ. ಪ್ರಕರಣದ ಬೆನ್ನುಬಿದ್ದ ಪೊಲೀಸರು ಕಳೆದ ಹತ್ತು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು, ದೆಹಲಿಯಲ್ಲೇ ಮಾದಕ ವಸ್ತು ತಯಾರಿಸಿ ಬೆಂಗಳೂರಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗೆ ಸರಬರಾಜು ಮಾಡುತ್ತಿದ್ದ ದೆಹಲಿ ಮೂಲದ ಆಮ್ನೀ ಸಿಂಗ್ ಹಾಗೂ ನೈಜೀರಿಯಾ ಮೂಲದ ಓಬಮ್ ಎಂಬಿಬ್ಬರನ್ನು ಹೆಡೆಮುರಿಕಟ್ಟಿದ್ದಾರೆ. ಒಟ್ಟಾರೆ ಡ್ರಗ್ಸ್ ಜಾಲದ ವಿರುದ್ಧ ಬೆಂಗಳೂರು ಪೊಲೀಸರ ಈ ಸರ್ಜಿಕಲ್ ಸ್ಟ್ರೈಕ್ ಮುಂದುವರೆದಿದೆ.ಇದನ್ನೂ ಓದಿ: ಬಸ್ ಸೌಲಭ್ಯಕ್ಕೆ ಆಗ್ರಹ| ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ತಡೆದು ಯಡಹಳ್ಳಿ ವಿದ್ಯಾರ್ಥಿಗಳ ಆಕ್ರೋಶ

