ಹಾಸನ: ಬೇಲೂರು ತಾಲೂಕಿನಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಹಾಗೂ ಗುಂಪು ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಗೆ ಇಂದು ನಾಲ್ಕನೇ ದಿನವಾಗಿದ್ದು, ಹಗಲು ವೇಳೆ ಕಾರ್ಮಿಕರು ಕಾಫಿ ಕುಯ್ಲು ಮಾಡುತ್ತಿರುವುದರಿಂದ ಯಾವುದೇ ಅನಾಹುತವಾಗದಂತೆ ಸಂಜೆ 5 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.
ಸತತ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿರುವುದರಿಂದ ಇಂದು ಸಂಜೆಯವರೆಗೂ ಕುಮ್ಕಿ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿತ್ತು. ನಿನ್ನೆ ಸೆರೆ ಹಿಡಿದ ಎರಡು ಸಲಗಗಳನ್ನು ನಾಗರಹೊಳೆಗೆ ಬಿಡಲು ನಾಲ್ಕು ಕುಮ್ಕಿ ಆನೆಗಳು ತೆರಳಿದ್ದವು. ನಿನ್ನೆ ಬಿಕ್ಕೋಡು ತಾತ್ಕಾಲಿಕ ಕ್ಯಾಂಪ್ಗೆ ಸಕ್ಕರೆಬೈಲು ಕ್ಯಾಂಪ್ನಿಂದ ಜೂ.ಅರ್ಜುನ, ಭೀಷ್ಮ, ಸಾಗರ್, ರಾಮಾಪುರ ಕ್ಯಾಂಪ್ನಿಂದ ಪಾರ್ಥಸಾರಥಿ, ಧರ್ಮ ಬಂದಿಳಿದಿವೆ. ಒಟ್ಟು ಹನ್ನೆರಡು ಕುಮ್ಕಿ ಆನೆಗಳೊಂದಿಗೆ ಇಂದು ಸಂಜೆ ಗುಂಪು ಕಾಡಾನೆಗಳ ಓಡಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಆಪರೇಷನ್ ಜೋಡಿ ಸಲಗ ಸಕ್ಸಸ್ – ಒಂದೇ ದಿನ ಎರಡು ನರಹಂತಕ ಪುಂಡಾನೆಗಳ ಸೆರೆ
ಕ್ಯಾಂಪ್ನಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಶೆಟ್ಟಿಹಳ್ಳಿ (Shettihalli) ಗ್ರಾಮದ ಬಳಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಇವುಗಳನ್ನು ಭದ್ರ ಅಭಯಾರಣ್ಯಕ್ಕೆ ನಿಧಾನವಾಗಿ ಓಡಿಸಲಾಗುತ್ತಿದೆ. ಕಾರ್ಯಾಚರಣೆ ವೇಳೆ ವಿರೋಧ ತೋರುವ ಗುಂಪಿನಲ್ಲಿರುವ ಗಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ 350 ರಿಂದ 400 ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿದ್ದಾರೆ.
ಕಾರ್ಯಾಚರಣೆ ಆರಂಭಕ್ಕೂ ಮುನ್ನ ಎಪಿಸಿಸಿಎಫ್ ಮನೋಜ್ ರಾಜನ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ 32 ಕಾಡಾನೆಗಳು ಡ್ರೋನ್ ಕ್ಯಾಮೆರಾಗೆ ಸೆರೆಯಾಗಿದ್ದು, ಇದೇ ಆನೆಗಳ ಗುಂಪನ್ನು ಓಡಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಗ್ರಾಮಸ್ಥರು, ಸಿಬ್ಬಂದಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಎಪಿಸಿಸಿಎಫ್ ಮನೋಜ್ ರಾಜನ್ ಯಾರಿಗೂ ಯಾವುದೇ ಸಮಸ್ಯೆ ಆಗದಂತೆ ಆ ಕಾಡಾನೆಗಳನ್ನು ಓಡಿಸಲು ಸೂಚನೆ ನೀಡಿದರು. ಇದನ್ನೂ ಓದಿ: ನರಹಂತಕ ಜೋಡಿ ಸಲಗಗಳ ಸೆರೆಗೆ ಮುಂದುವರಿದ ಕಾರ್ಯಾಚರಣೆ
