ಬೆಂಗಳೂರು/ಭೋಪಾಲ್: ಸೈಬರ್ ಕ್ರೈಂ (Cyber Crime) ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಭೀಕರ ಅಪಘಾತದಲ್ಲಿ (Accident) ಮೃತಪಟ್ಟಿರುವ ಘಟನೆ ನಡೆದಿದೆ.
ಭೋಪಾಲ್‌ನಿಂದ ಇಂದೋರ್‌ಗೆ ತೆರಳುತ್ತಿದ್ದ ವೇಳೆ ಬಸ್ ಪ್ರಪಾತಕ್ಕೆ ಉರುಳಿದ ಪರಿಣಾಮ ಇನ್ಸ್‌ಪೆಕ್ಟರ್ ರವಿ ಕೆ.ಬಿ. (Ravi KB) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೆಪಿಎಸ್‌ಸಿ ಅಕ್ರಮ: ಇಂದು ಸಿಐಡಿ ವಿಚಾರಣೆಗೆ ಗ್ಯಾನೇಂದ್ರ ಕುಮಾರ್ ಹಾಜರಾಗುವ ಸಾಧ್ಯತೆ
ಅಪಘಾತದಲ್ಲಿ ರವಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ರವಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ ಸುಮಾರು 7.30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸೈಬರ್ ಪ್ರಕರಣದ ತನಿಖೆಗೆ ತೆರಳಿದ್ದ ತಂಡ
ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ರವಿ ಕೆ.ಬಿ., ಸೈಬರ್ ಕ್ರೈಂ ಪ್ರಕರಣವೊಂದರ ತನಿಖೆಗಾಗಿ ಪೊಲೀಸ್ ತಂಡದೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದರು. ಭೋಪಾಲ್‌ನಿಂದ ಇಂದೋರ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ರವಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಪಿಎಸ್‌ಐ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಕೆ.ಜಿಗೆ 25 ರೂ.ಯಿದ್ದ ಈರುಳ್ಳಿ ಬೆಲೆ ಈಗ 65ಕ್ಕೆ – ಯಾಕೆ ಈ ಹೆಚ್ಚಳ? ಮತ್ತೆ ಇಳಿಕೆಯಾಗುತ್ತಾ?
ಹಲವು ಠಾಣೆಗಳಲ್ಲಿ ಸೇವೆ
ಇನ್ಸ್‌ಪೆಕ್ಟರ್ ರವಿ ಕೆ.ಬಿ. ಅವರು ಈ ಹಿಂದೆ ಬೆಂಗಳೂರಿನ ಅಶೋಕನಗರ, ಇಂದಿರಾನಗರ ಹಾಗೂ ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ ರವಿ ಕೆ.ಬಿ. ಅವರು ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಈ ದುರ್ಘಟನೆಯಿಂದ ಪೊಲೀಸ್ ಇಲಾಖೆಯಲ್ಲಿ ಹಾಗೂ ಸಹೋದ್ಯೋಗಿಗಳಲ್ಲಿ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಮಂಡ್ಯ ಕಾರಾಗೃಹದಲ್ಲಿ ರಾಜ್ಯಾತಿಥ್ಯ ಆರೋಪ – ವೈರಲ್ ಪತ್ರದಲ್ಲಿ ಬೀಡಿ-ಸಿಗರೇಟ್ ಬೇಡಿಕೆಯ ಸೀಕ್ರೆಟ್ ಬಯಲು
