Connect with us

ರಾಜ್ಯದಲ್ಲಿ ಮತ್ತೆ ಜನತಾ ಲಾಕ್‍ಡೌನ್ ವಿಸ್ತರಣೆ ಫಿಕ್ಸ್ – ಮೇ 24ರ ಬಳಿಕವೂ ಲಾಕ್ ಲಾಕ್..!

ರಾಜ್ಯದಲ್ಲಿ ಮತ್ತೆ ಜನತಾ ಲಾಕ್‍ಡೌನ್ ವಿಸ್ತರಣೆ ಫಿಕ್ಸ್ – ಮೇ 24ರ ಬಳಿಕವೂ ಲಾಕ್ ಲಾಕ್..!

– ಸ್ಪೆಷಲ್ ಪ್ಯಾಕೇಜ್ ಘೋಷಿಸಲು ಸರ್ಕಾರ ಒಲವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಕೇವಲ ಟೆಸ್ಟಿಂಗ್ ಕಡಿಮೆ ಮಾಡಿರೋ ಕಾರಣ ಕಡಿಮೆ ಸಂಖ್ಯೆ ಬರ್ತಿದೆ. ಆದರೆ ಸಕ್ರಿಯ ಕೇಸ್‍ಗಳ ಸಾಲಿನಲ್ಲಿ ಇಡೀ ದೇಶದಲ್ಲಿ ಕರ್ನಾಟಕವೇ ನಂಬರ್ 1. ಕರ್ನಾಟಕದಲ್ಲಿ ಭರ್ತಿ 6 ಲಕ್ಷ ಸಕ್ರಿಯ ಕೇಸ್‍ಗಳಿವೆ. ಪಾಸಿಟಿವಿಟಿ ರೇಟ್ 25ಕ್ಕಿಂತಲೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಲಾಕ್‍ಡೌನ್‍ಗೆ ಸರ್ಕಾರದ ಸಚಿವರು, ತಜ್ಞರು ಕೂಡ ಒತ್ತಡ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇನ್ನೊಂದು ವಾರ ಅಂದರೆ ಮೇ 24ರ ಜೊತೆಗೆ ಮೇ 30ರವರೆಗೂ ಲಾಕ್‍ಡೌನ್ ವಿಸ್ತರಿಸೋದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಅಂತ ತಿಳಿದು ಬಂದಿದೆ.

ಕೊರೊನಾ ಸೋಂಕು, ಸಾವುಗಳು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗದ ಕಾರಣ ಈ ತಿಂಗಳಾಂತ್ಯದವರೆಗೂ ಜನತಾ ಲಾಕ್‍ಡೌನ್ ಮುಂದುವರಿಸಲು ಚಿಂತಿಸಿದೆ. ಇದರ ಜೊತೆಗೆ ನೆರೆಯ ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿ ಹಲವು ರಾಜ್ಯಗಳು ಶ್ರಮಿಕ ಮತ್ತು ಬಡ ವರ್ಗಕ್ಕೆ ಲಾಕ್‍ಡೌನ್ ವಿಶೇಷ ಪ್ಯಾಕೇಜ್ ಘೋಷಿಸಿರೋದು ಬಿಎಸ್‍ವೈ ಸರ್ಕಾರದ ಮೇಲೆ ಪರೋಕ್ಷ ಒತ್ತಡ ಉಂಟು ಮಾಡಿದೆ. ಅಲ್ಲದೆ ವಿಪಕ್ಷಗಳು, ಜನಸಾಮಾನ್ಯರು ವಿಶೇಷ ಪ್ಯಾಕೇಜ್‍ಗೆ ಒತ್ತಾಯಿಸಿ, ಬೀದಿಗೆ ಇಳಿಯುತ್ತಿದ್ದಾರೆ. ಹೀಗಾಗಿ ಕೆಲಸವಿಲ್ಲದೇ ಕಂಗೆಟ್ಟು ಕುಳಿತಿರುವ ಬಡ ಮತ್ತು ಶ್ರಮಿಕ ವರ್ಗಕ್ಕೆ ಸ್ಪೆಷಲ್ ಪ್ಯಾಕೇಜ್ ನೀಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ಮಂಥನ ನಡೆಸಿದ್ದಾರೆ. ಇನ್ನು ಮೂರು ದಿನಗಳಲ್ಲಿ ಲಾಕ್‍ಡೌನ್ ಪ್ಯಾಕೇಜ್ ಅನ್ನು ಸಿಎಂ ಅಂತಿಮಗೊಳಿಸಲಿದ್ದಾರೆ. ಗುರುವಾರ ಅಥವಾ ಶುಕ್ರವಾರ ಲಾಕ್‍ಡೌನ್ ವಿಸ್ತರಣೆ ಮತ್ತು ಲಾಕ್‍ಡೌನ್ ಪ್ಯಾಕೇಜ್ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತ ಘೋಷಣೆ ಹೊರಡಿಸುವ ಸಂಭವ ಇದೆ. ಆದರೆ ಈ ಆರ್ಥಿಕ ಮುಗ್ಗಟ್ಟಿನ ಈ ಸಂದರ್ಭದಲ್ಲಿ ಯಾರಿಗೆ ಯಾವ ರೀತಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಬಹುದು ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಲಾಕ್ ಪ್ಯಾಕೇಜ್ ನಿರೀಕ್ಷೆ..!
* ಕರೆಂಟ್, ವಾಟರ್ ಬಿಲ್ ಆಧಾರದಲ್ಲಿ ಬಡವರ ಖಾತೆಗೆ ಹಣ..?
* ವಾಟರ್, ಕರೆಂಟ್ ಬಿಲ್ ಪಾವತಿಗೆ 1 ತಿಂಗಳು ಹೆಚ್ಚಿನ ಕಾಲಾವಕಾಶ..?
* ಮನೆ ತೆರಿಗೆ ಪಾವತಿಗೆ ರಿಯಾಯಿತಿ, ಸಮಯಾವಕಾಶ ಸಾಧ್ಯತೆ
* ಮನೆ ಬಾಡಿಗೆ ಪಾವತಿಗೆ ಮಾಲೀಕರು ಒತ್ತಡ ಹಾಕುವಂತಿಲ್ಲ (ಒತ್ತಡ ಹೇರಿದ್ರೆ ಪೊಲೀಸ್ ಠಾಣೆಗೆ ಹೋಗಬಹುದು)
* ಇಂದಿರಾ ಕ್ಯಾಂಟೀನ್‍ನಲ್ಲಿ ಈಗಾಗಲೇ ಉಚಿತ ಊಟದ ವ್ಯವಸ್ಥೆ ಆಗಿದೆ
* ಬಿಪಿಎಲ್ ಕಾರ್ಡ್ ಆಧಾರದಲ್ಲಿ ರೇಷನ್ ಕಿಟ್ ಕೊಡಬಹುದು
* 5 ಕೆಜಿ ಅಕ್ಕಿ ಸೇರಿದಂತೆ ಎಲ್ಲಾ ರೇಷನ್ ಒಳಗೊಂಡ ಫುಡ್ ಕಿಟ್..?

ಜೊತೆಗೆ ಲಾಕ್‍ಡೌನ್‍ನಿಂದ ಸಾಕಷ್ಟು ತೊಂದರೆ ಅನುಭವಿಸಿರುವ ತಳಸಮುದಾಯಗಳಿಗೆ ಕಳೆದ ಬಾರಿಯಂತೆಯೇ ಹಣ ಹಾಕ್ತಾರಾ ಅನ್ನೋ ನಿರೀಕ್ಷೆ ಕೂಡ ಇದೆ.
* ಆಟೋ/ಕ್ಯಾಬ್ ಚಾಲಕರ ಖಾತೆಗೆ ಹಣ..? (ಕಳೆದ ವರ್ಷ 5 ಸಾವಿರ ನೆರವು)
* ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು?
* ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು? (ಕಳೆದ ವರ್ಷ 5 ಸಾವಿರ ನೆರವು)
* ಕಟ್ಟಡ ಕಾರ್ಮಿಕರಿಗೆ ಮನಿ ಪ್ಯಾಕೇಜ್..?
* ಹೋಟೆಲ್ ಕಾರ್ಮಿಕರಿಗೆ ಹಣದ ಪ್ಯಾಕೇಜ್..?
* ಹೂ, ತರಕಾರಿ ಬೆಳೆಗಾರರಿಗೆ ಹಣದ ನೆರವು?
* ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ?

ಇನ್ನೆರಡು ವಾರ ಲಾಕ್‍ಡೌನ್‍ಗೆ ತಜ್ಞರ ಸಲಹೆ..!
ಲೋಕಲ್ ಲಾಕ್‍ಡೌನ್ ಅಥವಾ ಜೂನ್ ತಿಂಗಳ ಮೊದಲ ಎರಡು ವಾರದವರೆಗೂ ಜನತಾ ಲಾಕ್‍ಡೌನ್ ವಿಸ್ತರಣೆ ಆಗಬಹುದು. ಯಾವುದಕ್ಕೂ ರೆಡಿ ಇರಿ ಎಂಬ ಸಂದೇಶವನ್ನು ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ತಲುಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಜ್ಞರ ವರದಿಯಲ್ಲಿ ಏನಿದೆ..?
* ರಾಜ್ಯದಲ್ಲಿ ಮೇ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿ
* ಸೋಂಕು ತಗ್ಗದಿದ್ದರೆ ಜೂನ್‍ನ ಮೊದಲ 15 ದಿನ ಕಂಪ್ಲೀಟ್ ಲಾಕ್ ಮಾಡಿ
* ವಾರದಲ್ಲಿ 2 ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನೀಡಿ (ನಿತ್ಯ ಬೇಡ)
* ಮದ್ಯದಂಗಡಿಗಳಲ್ಲಿ ಪಾರ್ಸೆಲ್‍ಗೂ ಬ್ರೇಕ್ ಹಾಕಿ, ಬಂದ್ ಮಾಡಿ
* ಖಾಸಗಿ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಿ
* ಟ್ರೇಸಿಂಗ್, ಟ್ರೀಟ್ಮೆಂಟ್, ಟೆಸ್ಟಿಂಗ್ ಹೆಚ್ಚಳ ಮಾಡಿ
* ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಿ
* ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಆಗದಂತೆ ನೋಡಿಕೊಳ್ಳಿ

ನಾಳೆ ಎಲ್ಲಾ ಡಿಸಿಗಳ ಜೊತೆ ಸಿಎಂ ಸಭೆ..!
ಮಂಗಳವಾರ ಪ್ರಧಾನಿ ಮೋದಿ, ಸೋಂಕು ಹೆಚ್ಚಿರುವ ರಾಜ್ಯದ 17 ಜಿಲ್ಲೆಗಳ ಡಿಸಿಗಳ ಜೊತೆ ವರ್ಚೂವಲ್ ಸಭೆ ನಡೆಸಲಿದ್ದಾರೆ. ಇದಕ್ಕೂ ಒಂದು ದಿನ ಮೊದಲೇ ಅಂದ್ರೆ ನಾಳೆ ಸಿಎಂ ಯಡಿಯೂರಪ್ಪ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಲಾಕ್ ವಿಸ್ತರಣೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಜೊತೆಗೆ ನಾಳೆಯೇ ಕೊರೋನಾ ಉಸ್ತುವಾರಿಗಳ ಸಚಿವರ ಜೊತೆಗೂ ಸಿಎಂ ಸಮಾಲೋಚನೆ ಮಾಡಲಿದ್ದಾರೆ.

Advertisement
Advertisement