Connect with us

ಅಂಗವೈಕಲ್ಯದಿಂದ ಮನೆ ಬಿಟ್ಟು ಬರಲಾಗದ ಸ್ಥಿತಿ- ಕೆಲಸಕ್ಕೆ ಹೋಗಲು ವಿಕಲಚೇತನರ ವಾಹನಕ್ಕೆ ಕೇಳ್ತಿದ್ದಾರೆ ಸಹಾಯ

ಅಂಗವೈಕಲ್ಯದಿಂದ ಮನೆ ಬಿಟ್ಟು ಬರಲಾಗದ ಸ್ಥಿತಿ- ಕೆಲಸಕ್ಕೆ ಹೋಗಲು ವಿಕಲಚೇತನರ ವಾಹನಕ್ಕೆ ಕೇಳ್ತಿದ್ದಾರೆ ಸಹಾಯ

ಚಿಕ್ಕಬಳ್ಳಾಪುರ: ಹೀಗೆ ಹುಟ್ಟಿದಾಗಿನಿಂದಲೇ ತನ್ನ ಎರಡು ಕಾಲುಗಳು ಅಂಗವೈಕಲ್ಯಕ್ಕೆ ಗುರಿಯಾಗಿ, ಮನೆ ಬಿಟ್ಟು ಬರಲಾಗದೆ, ಜೈಲು ಹಕ್ಕಿ ತರ ಮನೆಯಲ್ಲೇ ಬಂಧಿಯಾಗಿರೋ ಇವರ ಹೆಸರು ಆದಿನಾರಾಯಣ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಆದಿಮೂರ್ತಿ-ಅಂಜಿನಮ್ಮ ದಂಪತಿಯ ಏಕೈಕ ಪುತ್ರ.

ಹುಟ್ಟಿದಾಗಿನಿಂದಲೇ ಇವರ ಎರಡು ಕಾಲುಗಳು ಹಾಗೂ ಒಂದು ಕೈ ಅಂಗವೈಕಲ್ಯಕ್ಕೆ ತುತ್ತಾಗಿದೆ. ಹೀಗಾಗಿ 25 ವರ್ಷಗಳಿಂದಲೂ ಮನೆಯಲ್ಲೇ ಸುಖಾಸುಮ್ಮನೆ ಕೂತಿರೋ ಆದಿನಾರಾಯಣ ಅವರಿಗೆ ತನ್ನ ಬದುಕಿನ ಬಗ್ಗೆ ಎಲ್ಲಿಲ್ಲದ ಸಂಕಟ. ತನ್ನ ಬದಕು ಹೀಗಾಯ್ತು ಅನ್ನೋ ಕೊರಗು. ಆದ್ರೆ 25 ವರ್ಷ ಸಾಕಿ ಸಲುಹಿದ ತಂದೆ ತಾಯಿಗೆ ಕನಿಷ್ಠ ಈಗಾಲಾದ್ರೂ ಆಸರೆಯಾಗಬೇಕು ಅನ್ನೋ ಮಹದಾಸೆ ಆದಿನಾರಾಯಣರದ್ದು.

ಸುಖಾಸುಮ್ಮನೆ ಮನೆಯಲ್ಲಿ ಕೂರುವುದರ ಬದಲು ಏನಾದ್ರೂ ಕೆಲಸ ಮಾಡಿ ದುಡಿದು ತಂದೆ ತಾಯಿಯನ್ನ ಸಾಕೋಣ ಅನ್ನೋ ಮಹಾದಾಸೆ ಇವರಿಗಿದೆ. ಇದಕ್ಕೆ ಒತ್ತಾಸೆಯಾಗಿ ಬಾಗೇಪಲ್ಲಿಯ ಪೆಟ್ರೋಲ್ ಬಂಕ್‍ನ ಮಾಲೀಕರು ಇವರಿಗೆ ಕ್ಯಾಶಿಯರ್ ಕೆಲಸ ಕೊಡಲು ಒಪ್ಪಿದ್ದಾರೆ. ಆದ್ರೆ ಮನೆಯ ಹೊಸ್ತಿಲು ಬಿಟ್ಟು ಆಚೆ ಬರಲು ಹರಸಾಹಸ ಪಡಿಬೇಕಿರೋ ಆದಿನಾರಾಯಣ ಅವರು, ಯಾರಾದ್ರೂ ಒಂದು ವಿಕಲಚೇತನರ ವಾಹನ ಕೊಡಿಸಿದ್ರೆ ನಾನೇ ದುಡಿದು ತಂದೆ ತಾಯಿಯನ್ನ ಸಾಕುವ ಛಲ ನನ್ನದು ಅಂತಿದ್ದಾರೆ.

ಇನ್ನೂ ಕಡು ಬಡವರಾಗಿರೋ ಆದಿಮೂರ್ತಿ ಅಂಜಿನಮ್ಮ ದಂಪತಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕಬ್ಬಿಣದ ತಗಡಿನ ಶೀಟ್ ಮನೆಯಲ್ಲಿ ವಾಸವಾಗಿರೋ ಈ ದಂಪತಿಗೆ ಇತ್ತೀಚೆಗೆ ಬರಗಾಲ ಬಂದು ಕೂಲಿ ಸಿಗೋದು ಕೂಡ ಕಷ್ಟವಾಗಿ ಮನೆಯಲ್ಲಿ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆಯಂತೆ. ಇನ್ನೂ ಸ್ಥಳೀಯ ಜನಪ್ರತಿನಿಧಿ ಬಳಿ ವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಯಾರಾದ್ರೂ ಸಹಾಯ ಮಾಡಿ ಅಂತಿದ್ದಾರೆ.

ವಿಕಲಚೇತನರಾದ್ರೂ ಉದ್ಯೋಗ ಮಾಡಿ ಹೆತ್ತವರನ್ನ ಸಾಕಬೇಕೆಂಬ ಆಸೆ ಹೊತ್ತಿರುವ ಈ ಸ್ವಾಭಿಮಾನಿಗೆ ಯಾರಾದ್ರೂ ಸಹಾಯ ಮಾಡಬೇಕಿದೆ.

 

Advertisement
Advertisement